ADVERTISEMENT

ಮಡಿವಾಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮೂವರು ಶಾಸಕರಿಂದ ತಲಾ ₹10 ಲಕ್ಷ

ಮಡಿವಾಳ ಸಮಾಜದ ಸಮುದಾಯ ಭವನ, ಹಾಸ್ಟೆಲ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 15:14 IST
Last Updated 1 ಫೆಬ್ರುವರಿ 2025, 15:14 IST
ಕೋಲಾರದಲ್ಲಿ ಶನಿವಾರ ಮಡಿವಾಳ ಮಾಚಿದೇವರ ಜಯಂತಿಯನ್ನು ಶಾಸಕ ಕೊತ್ತೂರು ಮಂಜುನಾಥ್‌ ಉದ್ಘಾಟಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ಸಮುದಾಯದವರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶನಿವಾರ ಮಡಿವಾಳ ಮಾಚಿದೇವರ ಜಯಂತಿಯನ್ನು ಶಾಸಕ ಕೊತ್ತೂರು ಮಂಜುನಾಥ್‌ ಉದ್ಘಾಟಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ಸಮುದಾಯದವರು ಪಾಲ್ಗೊಂಡಿದ್ದರು   

ಕೋಲಾರ: ‘ಮಡಿವಾಳ ಸಮಾಜದ ಕಾರ್ಯಚಟುವಟಿಕೆಗಳಿಗೆ ಮತ್ತು ಶೈಕ್ಷಣಿಕವಾಗಿ ಮುಂದೆ ಬರಲು ಅವಶ್ಯವಿರುವ ಸಮುದಾಯದ ಭವನ ಹಾಗೂ ಹಾಸ್ಟೆಲ್ ನಿರ್ಮಾಣಕ್ಕೆ ನಾನು, ವಿಧಾನ ಪರಿಷತ್‌ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್ ತಲಾ ₹ 10 ಲಕ್ಷ ಅನುದಾನದ ಜೊತೆಗೆ ಸರ್ಕಾರದಿಂದಲೂ ವಿಶೇಷ ಅನುದಾನ ಕೊಡಿಸಲಾಗುತ್ತದೆ’ ಎಂದು ಶಾಸಕ ಕೂತ್ತೂರು ಜಿ. ಮಂಜುನಾಥ್ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಣ್ಣಪುಟ್ಟ ಸಮಾಜಗಳನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಪ್ರತಿ ಸಮಾಜದಲ್ಲೂ ವಿದ್ಯಾವಂತರು ಮತ್ತು ಬುದ್ಧಿವಂತರು ಇರಬೇಕು. ತಮ್ಮ ಸಮುದಾಯಕ್ಕೆ ಆಗುವ ಅನ್ಯಾಯವನ್ನು ಹಾಗೂ ಸಮಸ್ಯೆಗಳನ್ನು ಕೇಳಿ ಪಡೆಯಲು‌ ಸಾಧ್ಯವಾಗುತ್ತದೆ. ತಮಗೆ ಅವಶ್ಯವಿದ್ದರೆ ಉಳಿದ ಜನಪ್ರತಿನಿಧಿಗಳ ಕಡೆಯಿಂದಲೂ ಅನುದಾನ ಕೊಡಿಸಲು ಸಿದ್ಧ’ ಎಂದರು.

ADVERTISEMENT

‘ಯಾವುದೇ ಸಮುದಾಯಗಳಿಗೆ ಸರ್ಕಾರದ ಯೋಜನೆಗಳು ತಲುಪದೇ ಇದ್ದಾಗ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ. ಅವುಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತೇವೆ. ಸಮಾಜದ ಮುಖಂಡರು ಅಂತಹವರನ್ನು ಗುರುತಿಸಿ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಬೇಕು. ಹಿಂದೆ ಎಷ್ಟೋ ವರ್ಷಗಳ ಹಿಂದೆ ಮೀಸಲಾತಿ, ಸಹಾಯ ಮಾಡುವ ಗುಣ ಇರಲಿಲ್ಲ. ಆದರೂ ಅವರು ಸಾಧನೆ ಮಾಡಿದ್ದಾರೆ. ಇವತ್ತು ಸರ್ಕಾರಗಳು ಆನೇಕ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಕೊಟ್ಟರೂ ಸಾಧನೆ ಮಾಡುತ್ತಿಲ್ಲ. ಪ್ರತಿಯೊಂದು ಗ್ರಾಮದಲ್ಲೂ ಮಹಾನ್ ವ್ಯಕ್ತಿಗಳನ್ನು ನಾವು ಕಾಣಬೇಕು’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್ ಕುಮಾರ್ ಮಾತನಾಡಿ, ‘ಸಣ್ಣಪುಟ್ಟ ಸಮಾಜದ ಜಯಂತಿಗಳ ಆಚರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಬೇಕು. ಮೀಸಲಾತಿ ಸರ್ಕಾರದ ಹಂತದಲ್ಲಿ ತೀರ್ಮಾನವಾಗುತ್ತದೆ. ಅಂತಹ ಸಂದರ್ಭದಲ್ಲಿ ಅಧಿವೇಶನದಲ್ಲಿ ತಮ್ಮ ಪರವಾಗಿ ಧ್ವನಿ ಎತ್ತುತ್ತೇವೆ. ಸಮುದಾಯ ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾಗಿದೆ. ಆದ್ದರಿಂದ ಹಾಸ್ಟೆಲ್ ನಿರ್ಮಾಣ ಮಾಡಲು ಮುಂದಾಗಿ. ನಾವು ಜೊತೆಗಿದ್ದು ಅನುದಾನ ಕೊಡತ್ತೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ‘ಮಡಿವಾಳ ಸಮುದಾಯದವರು ತಮ್ಮ ವೃತ್ತಿಯನ್ನು ತೊರೆದರೆ ನಮ್ಮ ಕೊಳಕು ಬಟ್ಟೆ ಹಾಗೆಯೇ ಇರುತ್ತದೆ. ಪ್ರತಿಯೊಂದು ಸಮುದಾಯವನ್ನು ನಾವೆಲ್ಲರೂ ಗೌರವಿಸಬೇಕಿದೆ. ಮಡಿವಾಳ ಮಾಚಿದೇವ ಸಮುದಾಯವನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿಸುವ ವಿಚಾರದಲ್ಲಿ ಸರ್ಕಾರಕ್ಕೆ ತಿಳಿಸುವ ವಿಚಾರದಲ್ಲಿ ನಾವು ಸಮುದಾಯದ ಪರವಾಗಿ ಇರುತ್ತೇವೆ. ಸಮುದಾಯ ಭವನ ನಿರ್ಮಾಣಕ್ಕೆ ₹ 10 ಲಕ್ಷ ಕೊಡುತ್ತೇನೆ’ ಭರವಸೆ ನೀಡಿದರು.

ಮಡಿವಾಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ‘ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಆದ್ದರಿಂದ ನಮ್ಮ ಸಮುದಾಯ ಬಗ್ಗೆ ಗಮನ ವಹಿಸಿ ಸರ್ಕಾರಕ್ಕೆ ತಿಳಿಸಿ. ನಮ್ಮ ಸಮುದಾಯದ ಬಡವರನ್ನು ಮೇಲೆತ್ತುವ ಕೆಲಸ ಮಾಡಬೇಕು. ನಗರದಲ್ಲಿರುವ ದೋಬಿ ಘಾಟ್‌ನಲ್ಲಿ ಸಮುದಾಯ ಭವನ ನಿರ್ಮಿಸಿಕೊಡಬೇಕು. ಜೊತೆಗೆ ಅನ್ನಪೂರ್ಣಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅದನ್ನು ಜಾರಿ ಮಾಡಿಸಬೇಕು. ನಮ್ಮ ಸಮುದಾಯವನ್ನು ಎಸ್‌ಸಿ ಸಮುದಾಯಕ್ಕೆ ಸೇರಿಸಿ’ ಎಂದು ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದ ಬಳಿ ಪಲ್ಲಕಿ ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಉಪಾಧ್ಯಕ್ಷೆ ಸಂಗೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ನಗರಸಭಾ ಸದಸ್ಯರಾದ ಗುಣಶೇಖರ್, ಮಂಜುನಾಥ್, ಸಮುದಾಯದ ಮುಖಂಡರಾದ ಮುರಳಿ ಮೋಹನ್, ಮಯೂರ, ಚಂದ್ರಶೇಖರ್ ಸೇರಿದಂತೆ ಸಮುದಾಯ ಮುಖಂಡರು ಮತ್ತು ಪದಾಧಿಕಾರಿಗಳು ಇದ್ದರು.

ಮಡಿವಾಳ ಮಾಚಿದೇವರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.