ADVERTISEMENT

ಬಂಗಾರಪೇಟೆ: ಕಾಲುವೆಯಲ್ಲಿ ಮುಳುಗಿ 3 ಮಕ್ಕಳ ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 14:08 IST
Last Updated 10 ಅಕ್ಟೋಬರ್ 2020, 14:08 IST
ಕೋಲಾರ ಜಿಲ್ಲೆ ಬಂಗಾರಪೇಟೆಯ ಕುಂಬಾರಪಾಳ್ಯದಲ್ಲಿ ಶನಿವಾರ ಮಕ್ಕಳು ನೀರಿನ ಕಾಲುವೆಯಲ್ಲಿ ಮುಳುಗಿ ಮೃತಪಟ್ಟ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.
ಕೋಲಾರ ಜಿಲ್ಲೆ ಬಂಗಾರಪೇಟೆಯ ಕುಂಬಾರಪಾಳ್ಯದಲ್ಲಿ ಶನಿವಾರ ಮಕ್ಕಳು ನೀರಿನ ಕಾಲುವೆಯಲ್ಲಿ ಮುಳುಗಿ ಮೃತಪಟ್ಟ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.   

ಕೋಲಾರ: ಜಿಲ್ಲೆಯ ಬಂಗಾರಪೇಟೆ ಹೊರವಲಯದ ಕುಂಬಾರಪಾಳ್ಯದಲ್ಲಿ ಶನಿವಾರ 3 ಮಕ್ಕಳು ನೀರಿನ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯ ಕೊಳೆಗೇರಿಯ ಸಾದಿಕ್‌ (12), ಫಯಾಜ್‌ (7) ಮತ್ತು ಮೋಹಿಕ್‌ (8) ಮೃತಪಟ್ಟ ಮಕ್ಕಳು. ಕುಂಬಾರಪಾಳ್ಯ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತಿದ್ದು, ಇಲ್ಲಿ ಆಟವಾಡಲು ಹೋಗಿದ್ದ ಮಕ್ಕಳು ಸಮೀಪದ ಕಾಲುವೆ ಬಳಿ ಹೋದಾಗ ದುರ್ಘಟನೆ ನಡೆದಿದೆ.

ರೈಲ್ವೆ ಕೆಳ ಸೇತುವೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ರೈಲ್ವೆ ಅಧಿಕಾರಿಗಳು ಕೆಳ ಸೇತುವೆಯಿಂದ ಮಳೆ ನೀರು ಹೊರಗೆ ಹರಿದು ಹೋಗುವಂತೆ ಮಾಡಲು ಇತ್ತೀಚೆಗೆ ಸುಮಾರು 200 ಮೀಟರ್‌ ದೂರದವರೆಗೆ ಕಾಲುವೆ ತೋಡಿಸಿದ್ದರು. 10 ಅಡಿ ಆಳವಿರುವ ಕಾಲುವೆಯಲ್ಲಿ 7 ಅಡಿಗೂ ಹೆಚ್ಚು ಮಳೆ ನೀರು ನಿಂತಿತ್ತು. ಕಾಲುವೆ ಬಳಿ ಹೋಗಿರುವ ಮಕ್ಕಳು ಆಕಸ್ಮಿಕವಾಗಿ ಒಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕಾಲುವೆ ಸುತ್ತಮುತ್ತ ಕೃಷಿ ಜಮೀನುಗಳಿದ್ದು, ನಿರ್ಜನ ಪ್ರದೇಶವಾದ ಆ ಭಾಗದಲ್ಲಿ ಜನರ ಓಡಾಟ ಕಡಿಮೆ ಇರುತ್ತದೆ. ಕುರಿಗಾಹಿಗಳು ಕಾಲುವೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಬಂಗಾರಪೇಟೆ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.