ADVERTISEMENT

ಕೋಲಾರ | 40 ಮಂದಿಗೆ ಕೊರೊನಾ ಸೋಂಕು

ಜಿಲ್ಲೆಯಲ್ಲಿ ಕೊಂಚ ತಗ್ಗಿದ ಸೋಂಕಿನ ಆರ್ಭಟ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:37 IST
Last Updated 1 ಆಗಸ್ಟ್ 2020, 16:37 IST
   

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆರ್ಭಟ ಕೊಂಚ ತಗ್ಗಿದ್ದು, ಶನಿವಾರ 40 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 769ಕ್ಕೆ ಏರಿಕೆಯಾಗಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 13 ಮಂದಿಗೆ ಸೋಂಕು ಹರಡಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 8 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 5 ಮಂದಿಗೆ ಸೋಂಕು ಹರಡಿದೆ. ಕೆಜಿಎಫ್ ತಾಲ್ಲೂಕಿನಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಒಬ್ಬರಿಗೆ ಸೋಂಕು ತಗುಲಿದೆ.

ಕೋಲಾರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 6 ಮಂದಿಗೆ, ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ಇಬ್ಬರಿಗೆ ಮತ್ತು ಹೊರ ಜಿಲ್ಲೆಗೆ ಹೋಗಿ ಬಂದಿದ್ದ ಒಬ್ಬರಿಗೆ ಸೋಂಕು ಬಂದಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 7 ಮಂದಿಗೆ ಮತ್ತು ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ತಗುಲಿದೆ.

ADVERTISEMENT

ಮಾಲೂರು ತಾಲ್ಲೂಕಿನಲ್ಲಿ 6 ಮಂದಿಗೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮೂವರಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಇವರೆಲ್ಲರೂ ವಿಷಮ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೇ, ಸುರಕ್ಷತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

54 ಮಂದಿ ಗುಣಮುಖ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಏರಿಕೆ ಗತಿಯಲ್ಲಿ ಸಾಗಿದ್ದು, ಆರೋಗ್ಯ ಇಲಾಖೆ ನಿರಾಳವಾಗಿದೆ. ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 54 ಮಂದಿ ಗುಣಮುಖರಾಗಿ ಶನಿವಾರ ಮನೆಗೆ ಮರಳಿದರು.

ಕೋಲಾರ ತಾಲ್ಲೂಕಿನ 32 ಮಂದಿ, ಮಾಲೂರು ತಾಲ್ಲೂಕಿನ ಮೂವರು, ಬಂಗಾರಪೇಟೆ ತಾಲ್ಲೂಕಿನ ಇಬ್ಬರು, ಕೆಜಿಎಫ್‌ 7, ಮುಳಬಾಗಿಲು 6 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 4 ಮಂದಿಯನ್ನು ಶನಿವಾರ ಮನೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.