ADVERTISEMENT

ವೇಮಗಲ್‌ನಲ್ಲಿ 44ನೇ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 14:03 IST
Last Updated 25 ಏಪ್ರಿಲ್ 2019, 14:03 IST
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಬುಧವಾರ ರಾತ್ರಿ ನಡೆದ ಕಠಾರಿಪಾಳ್ಯದ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವದಲ್ಲಿ ಪೂಜಾರಿ ಜಗದೀಶ್ ನೃತ್ಯ ಪ್ರದರ್ಶಿಸಿದರು.
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಬುಧವಾರ ರಾತ್ರಿ ನಡೆದ ಕಠಾರಿಪಾಳ್ಯದ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವದಲ್ಲಿ ಪೂಜಾರಿ ಜಗದೀಶ್ ನೃತ್ಯ ಪ್ರದರ್ಶಿಸಿದರು.   

ಕೋಲಾರ: ತಾಲ್ಲೂಕಿನ ವೇಮಗಲ್‌ನಲ್ಲಿ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿಯ 44ನೇ ವರ್ಷದ ಹೂವಿನ ಕರಗ ಮಹೋತ್ಸವ ಬುಧವಾರ ರಾತ್ರಿ ವೈಭವದಿಂದ ನಡೆಯಿತು.

ಹೂವಿನ ಕರಗ ಹೊತ್ತ ಪೂಜಾರಿ ಜಗದೀಶ್ ದೇವಾಲಯದಿಂದ ಹೊರ ಬರುತ್ತಿದ್ದಂತೆ ಗೋವಿಂದಾ, ಗೋವಿಂದಾ ನಾಮಸ್ಮರಣೆ ಮುಗಿಲು ಮುಟ್ಟಿತು.

ದೇವಾಲಯದ ಮುಂಭಾಗ ಕೆಲ ಕಾಲ ಕರಗ ನೃತ್ಯ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಿದ್ದು, ಕರಗದ ಪೂಜಾರಿ ವಿವಿಧ ಭಂಗಿಗಳಲ್ಲಿ ಕುಣಿಯುವ ಮೂಲಕ ಮನಸೆಳೆದರು.

ADVERTISEMENT

ಗ್ರಾಮದ ಎಲ್ಲಾದೇವಾಲಯಗಳಿಗೂ ಕರಗ ಆಗಮಿಸಿ ಪೂಜೆ ಸ್ವೀಕರಿಸಿದ ನಂತರ ಒಂದೂವರೆ ಗಂಟೆ ಕಾಲ ನಾದಸ್ವರ, ವಾದ್ಯ ಹಾಗೂ ತಮಟೆ ನಾದಕ್ಕೆ ನೃತ್ಯ ಪ್ರದರ್ಶನ ಮಾಡಿದರು. ಆನಂತರ ವಿವಿಧ ದೇವರುಗಳ ಉತ್ಸವ, ಪುಷ್ಪ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಕರಗ ಮಹೋತ್ಸವ ಸಂದರ್ಭದಲ್ಲಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವೇಮಗಲ್ ಪೊಲೀಸ್ ಉಪನಿರೀಕ್ಷಕ ಕೇಶವಮೂರ್ತಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.

ಲೋಖಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎಸ್.ವೆಂಕಟೇಶ್, ಅರುಣ್‌ಪ್ರಸಾದ್, ತಾಲ್ಲೂಕು ಪಂಚಾಯಿತಿ ಸದಸ್ಯ ವಿ.ಮುನಿಯಪ್ಪ, ವೇಮಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಗಣೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.