ADVERTISEMENT

ಶೇ 50ರಷ್ಟು ಹಣ ಜನಸೇವೆಗೆ: ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 14:48 IST
Last Updated 18 ಅಕ್ಟೋಬರ್ 2021, 14:48 IST
ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆಜಿಎಫ್ ಬಾಬು ಕೋಲಾರದಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹಧನದ ಚೆಕ್‌ ವಿತರಿಸಿದರು
ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆಜಿಎಫ್ ಬಾಬು ಕೋಲಾರದಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹಧನದ ಚೆಕ್‌ ವಿತರಿಸಿದರು   

ಕೋಲಾರ: ‘ಜಿಲ್ಲೆಯ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಜನರ ಸಮಸ್ಯೆ ಬಗೆಹರಿಸಲು ರಾಜಕೀಯ ವ್ಯಕ್ತಿಗಳು ಯಾರೂ ಮುಂದಾಗಿಲ್ಲ. ಹೀಗಾಗಿ ನನ್ನ ವಾರ್ಷಿಕ ಆದಾಯದಲ್ಲಿ ಶೇ 50ರಷ್ಟು ಹಣವನ್ನು ಜಿಲ್ಲೆಯ ಜನರ ಸೇವೆಗೆ ಖರ್ಚು ಮಾಡುತ್ತೇನೆ’ ಎಂದು ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆಜಿಎಫ್ ಬಾಬು ಘೋಷಿಸಿದರು.

ನಗರದ ಮಿಲ್ಲತ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸೋಮವಾರ ವಿದ್ಯಾ ಪ್ರೋತ್ಸಾಹಧನದ ಚೆಕ್‌ ವಿತರಿಸಿ ಮಾತನಾಡಿ, ‘ಪಿಯುಸಿ, ಪದವಿ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ 20 ಸಾವಿರ ಮಂದಿಗೆ ವರ್ಷಕ್ಕೆ ತಲಾ ₹ 2 ಸಾವಿರ ಹಣಕಾಸು ನೆರವು ಕೊಡುತ್ತೇನೆ’ ಎಂದು ಹೇಳಿದರು.

‘ನೆರವಿನ ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ನೀಡಲಾಗುವುದು. ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೂ ಸಹಾಯ ಮಾಡುತ್ತೇನೆ. ಪ್ರತಿ ಕಾಲೇಜಿನ ಪ್ರಾಂಶುಪಾಲರಿಂದ ವಿದ್ಯಾರ್ಥಿಗಳ ಮಾಹಿತಿ ಪಡೆದು 10 ದಿನದಲ್ಲಿ ಹಣಕಾಸು ನೆರವು ಕಲ್ಪಿಸುತ್ತೇವೆ. ಜತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಸೇವೆ ಮಾಡುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ಕೋವಿಡ್‌ನಿಂದ ಎಲ್ಲಾ ವರ್ಗದ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶೈಕ್ಷಣಿಕ ಸಂಸ್ಥೆ ನಡೆಸುತ್ತಿರುವವರ ಪರಿಸ್ಥಿತಿ ಹೇಳತೀರದು. ವಿದ್ಯಾರ್ಥಿಗಳ ಪೋಷಕರಿಗೆ ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೆಜಿಎಫ್‌ ಬಾಬು ಅವರು ವಿದ್ಯಾರ್ಥಿಗಳ ನೆರವಿಗೆ ಮುಂದಾಗಿರುವುದು ಶ್ಲಾಘನೀಯ’ ಎಂದು ಮಿಲ್ಲತ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇಫ್ತಿಕರ್ ಅಹಮ್ಮದ್‌ ಶರೀಫ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಜನರ ಪುಣ್ಯ: ‘ಕೆಜಿಎಫ್ ಬಾಬು ಅವರು ಕೊಡುಗೈ ದಾನಿಯಾಗಿ ಕೋಲಾರಕ್ಕೆ ಆಗಮಿಸಿರುವುದು ಜನರ ಪುಣ್ಯ. ಸೇವಾ ಮನೋಭಾವದಿಂದ ಸೇವೆ ಸಲ್ಲಿಸಿದಾಗ ಮಾತ್ರ ಮನೆ ಮಾತಾಗಲು ಸಾಧ್ಯ’ ಎಂದು ಭಾರತೀಯ ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

‘ರಾಜಕೀಯ ನಾಯಕರು ಕ್ಷೇತ್ರದ ಜನರಿಗೆ ಸಹಾಯ ಮಾಡಲು ಮುಂದಾಗಿಲ್ಲ. ಆದರೆ, ಬಾಬು ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನರ ಸೇವೆ ಮಾಡುತ್ತಿದ್ದಾರೆ. ಸರ್ಕಾರ ಪಡಿತರ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಬಾಬು ಅವರಿಗೆ ಎಲ್ಲರೂ ಶಕ್ತಿ ತುಂಬಬೇಕು’ ಎಂದು ಕೋರಿದರು.

ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮ್ಮದ್‌, ಮುಖಂಡರಾದ ಮೆಹಬೂಬ್‌ ಪಾಷಾ, ಸಿರಾಜ್, ಮೇಘಾರಾಜ್, ಮಂಜುನಾಥ್, ಸಮೀರ್, ಅಪ್ಜರ್‌ ಖಾನ್, ಷರೀಫ್ ಅಹಮದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.