ADVERTISEMENT

ವಿದೇಶದ ಸ್ವತ್ತಾಗುತ್ತಿರುವ ದೇಶದ ಪ್ರತಿಭೆಗಳು

ವಿಪ್ರ ಸಮಾವೇಶದಲ್ಲಿ ಕೆ.ಎನ್.ವೆಂಕಟನಾರಾಯಣ ಕಳವಳ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 8:59 IST
Last Updated 1 ಜನವರಿ 2018, 8:59 IST
ಕೋಲಾರದಲ್ಲಿ ಭಾನುವಾರ ನಡೆದ ವಿಪ್ರ ಸಮಾವೇಶವದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ್ ಮಾತನಾಡಿದರು. ತಂಬಿಹಳ್ಳಿಯ ಶ್ರೀಮಾಧವತೀರ್ಥ ಮಹಾ ಸಂಸ್ಥಾನದ ವಿದ್ಯಾಸಾಗರ ಮಾಧವ ತೀರ್ಥರು, ಸಾಹಿತಿ ರವೀಂದ್ರ ದೇಶಮುಖ್ ಚಿತ್ರದಲ್ಲಿದ್ದಾರೆ.
ಕೋಲಾರದಲ್ಲಿ ಭಾನುವಾರ ನಡೆದ ವಿಪ್ರ ಸಮಾವೇಶವದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ್ ಮಾತನಾಡಿದರು. ತಂಬಿಹಳ್ಳಿಯ ಶ್ರೀಮಾಧವತೀರ್ಥ ಮಹಾ ಸಂಸ್ಥಾನದ ವಿದ್ಯಾಸಾಗರ ಮಾಧವ ತೀರ್ಥರು, ಸಾಹಿತಿ ರವೀಂದ್ರ ದೇಶಮುಖ್ ಚಿತ್ರದಲ್ಲಿದ್ದಾರೆ.   

ಕೋಲಾರ: ‘ಜಾತಿಯ ಸೋಂಕಿಂದ ಪ್ರತಿಭಾವಂತರನ್ನು ಗುರುತಿಸುತ್ತಿರುವುದರಿಂದ ದೇಶದ ಪ್ರತಿಭೆಗಳು ವಿದೇಶಗಳ ಸ್ವತ್ತಾಗುತ್ತಿವೆ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದಿಂದ ಭಾನುವಾರ ನಡೆದ ವಿಪ್ರ ಸಮಾವೇಶ ಉದ್ಘಾಟಿಸಿ ಮತನಾಡಿ, ಸರ್ಕಾರಗಳು ಬ್ರಾಹ್ಮಣ ಸಮುದಾಯವನ್ನು ನಿರ್ವಲಕ್ಷಿಸುತ್ತಿವೆ. ಅದರಿಂದ ದೇಶಕ್ಕೆ ನಷ್ಟ ಎಂಬುದನ್ನು ಮರೆತಿವೆ ಎಂದು ದೂರಿದರು.

ವಿದ್ಯೆ, ಜ್ಞಾನಕ್ಕೆ ಜಾತಿ ತಾರತಮ್ಯ ಒಳಪಡಿಸಬೇಡಿ. ಸರ್.ಎಂ.ವಿಶ್ವೇಶ್ವರಯ್ಯ, ಡಿ.ವಿ.ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಾಂಗಾರ್ ಜಿಲ್ಲೆಯ ಆಸ್ತಿಯಾಗಿದ್ದರು. ಅವರು ದೇಶ, ಸಮಾಜಕ್ಕಾಗಿ ಜ್ಞಾನವನ್ನು ನೀಡಿದ್ದಾರೆಯೇ ಹೊರತು ತಮಗಾಗಿ ಏನು ಮಾಡಿಕೊಳ್ಳಲಿಲ್ಲ ಎಂದರು.

ADVERTISEMENT

ಸಮುದಾಯಕ್ಕೆ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಪ್ರತಿಭಾವಂತರು ಯಾವುದೇ ಜಾತಿಯವರಾಗಿರಲಿ ಅವರಿಗೆ ಅವಕಾಶ ನೀಡಿ. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬ್ರಾಹ್ಮಣರದ್ದು ಔದಾರ್ಯಪೂರ್ಣ ಮನಸ್ಸು, ನಾವು ಯಾರಿಗೂ ಕೆಡಕು ಬಯಸಲ್ಲ. ಸಂಸ್ಕಾರ, ಸಂಘಟನೆ, ಸ್ವಾವಲಂಬನೆ ನಮ್ಮ ಧ್ಯೇಯವಾಕ್ಯವಾಗಿದೆ. ವೇದ ಕಾಲದಿಂದಲೂ ನಾವು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು ಸರ್ಕಾರಗಳಿಗೆ ಅರಿವಿಲ್ಲ. ಈ ಕುರಿತು ತಿಳಿಸಿಕೊಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ತಂಬಿಹಳ್ಳಿಯ ಶ್ರೀಮಾಧವತೀರ್ಥ ಮಹಾ ಸಂಸ್ಥಾನದ ವಿದ್ಯಾಸಾಗರ ಮಾಧವ ತೀರ್ಥರು ಆಶೀರ್ವಚನ ನೀಡಿ ಮಾತನಾಡಿ, ‘ಬ್ರಾಹ್ಮಣರು ಸಂಸ್ಕಾರ ಮರೆಯಬಾರದು. ಸಂಧ್ಯಾವಂದನೆ, ಗಾಯತ್ರಿ ಜಪ ಮಾಡಿ, ಶ್ರದ್ಧಾವಂತರಾಗಿ ಬ್ರಾಹ್ಮಣರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಿಬೇಕು’ ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿರುವುದು ವಿಷಾದಕರ. ಹೆತ್ತ ತಂದೆತಾಯಿಯರನ್ನು ವೃದ್ದಾಶ್ರಮದಲ್ಲಿ ಬಿಟ್ಟು ಅವರಿಗೆ ಮಕ್ಕಳ ಮಮತೆ ಸಿಗದಂತೆ ಮಾಡಿದ್ದೇವೆ. ಯುವಕರು ಈ ಕುರಿತು ಅತ್ಮವಲೋಕನ ಮಾಡಿಕೊಳ್ಳಬೇಕು ಎಂದರು.

ಬ್ರಾಹ್ಮಣ ಯುವಕರ ಕೈಗಳು ಕೆಲಸಕ್ಕಾಗಿ ಚಾಚಬಾರದು. ಅವು ಕೆಲಸ ನೀಡಲು ಚಾಚಬೇಕು. ಸಂಸ್ಕಾರವಂತ ಬ್ರಾಹ್ಮಣರ ಶಕ್ತಿಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಸಾಹಿತಿ ರವೀಂದ್ರ ದೇಶಮುಖ್ ಹೇಳಿದರು.

ಸ್ವಾವಲಂಬನೆಗಾಗಿ ಆತ್ಮವಿಶ್ವಾಸದಿಂದ ಉದ್ಯೋಗ ಆರಂಭಿಸಿ, ಆತ್ಮವಿಶ್ವಾಸದ ಕೊರತೆ ನೀಗಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ. ದೇಶ ಕಟ್ಟುವ ಯುವಕರಿಗೆ ಅಬ್ದುಲ್‌ಕಲಾಂ ರೆಕ್ಕೆ ಕಟ್ಟಿದರು. ಯುವಕರನ್ನು ಕಂಡು ಅಮೇರಿಕಾದ ಒಬಾಮಾ ಹೆದರಿದ್ದರು. ಭಾರತೀಯ ಯುವಕರಿಗೆ ಅಮೇರಿಕಾದಲ್ಲಿ ಉದ್ಯೋಗ ಕಿತ್ತುಕೊಳ್ಳರಿ ಎಂದು ಕರೆ ನೀಡಿದ್ದರು ಎಂದು ನೆನಪಿಸಿಕೊಳ್ಳಬೇಕು ಎಂದರು.

ಭಜನೆಗಳು ಸ್ಥಗಿತಗೊಂಡ ಹಿನ್ನಲೆಯಲ್ಲಿ ಮನೆಗಳು ವಿಭಜನೆಯಾಗಿದ್ದು ಇದರೆ ಜತೆಗೆ ಮನಗಳೂ ವಿಭಜನೆಯಾಗಿವೆ. ಹಬ್ಬಗಳು ಬಾತೃತ್ವ ಬೆಳೆಸುತ್ತವೆ. ತಂದೆ, ತಾಯಿಯನ್ನು ನೋಡಿಕೊಳ್ಳದೇ ಎಷ್ಟು ಸಾಧನೆ ಮಾಡಿದರೇನು ಫಲ, ವೃದ್ದಾಶ್ರಮ, ಅಬಲಾಶ್ರಮಗಳನ್ನು ನೋಡಿದಾಗ ನೋವಾಗುತ್ತದೆ. ಭಾವನಾತ್ಮಕ ಬೆಸುಗೆ ನೀಡಿದರೆ ತಂದೆ ತಾಯಿಗಳು ಖುಷಿಯಿಂದ ಬದುಕುತ್ತಾರೆ ಎಂದು ತಿಳಿಸಿದರು.

ಸಮಾವೇಶಕ್ಕೂ ಮುನ್ನಾ ಬ್ರಾಹ್ಮಣ ಸಂಘದ ಸದಸ್ಯರು ವಿಪ್ರ ಸಮಾವೇಶದ ಅಂಗವಾಗಿ ನಗರದ ಶೋಭಾಯಾತ್ರೆ ನಡೆಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ಎನ್.ಕೆ.ಅಚ್ಚುತಾ, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿ ಶಿವಶಂಕರ್, ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎನ್.ವಾಸುದೇವಮೂರ್ತಿ, ಪದಾಧಿಕಾರಿಗಳಾದ ಚಂದ್ರಪ್ರಕಾಶ್, ರವಿಶಂಕರ್ ಅಯ್ಯರ್, ಉದಯಶಂಕರ್, ಅಶ್ವಥ್ಥನಾರಾಯಣರಾವ್, ಸತ್ಯನಾರಾಯಣರಾವ್ ಹಾಜರಿದ್ದರು.

**

ಬ್ರಾಹ್ಮಣ ಯುವಕರ ಕೈಗಳು ಕೆಲಸಕ್ಕಾಗಿ ಚಾಚಬಾರದು. ಅವು ಕೆಲಸ ನೀಡಲು ಚಾಚಬೇಕು. ಸಂಸ್ಕಾರವಂತ ಬ್ರಾಹ್ಮಣರ ಶಕ್ತಿಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ.
- ರವೀಂದ್ರ ದೇಶಮುಖ್, ಸಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.