ADVERTISEMENT

ಸಿರಿಧಾನ್ಯ ಮೇಳಕ್ಕೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 10:02 IST
Last Updated 6 ಜನವರಿ 2018, 10:02 IST
ತರಕಾರಿ ಕೆತ್ತನೆಗಳನ್ನು ನೋಡಲು ಸಾರ್ವಜನಿಕರು ಮುಗಿಬಿದ್ದರು
ತರಕಾರಿ ಕೆತ್ತನೆಗಳನ್ನು ನೋಡಲು ಸಾರ್ವಜನಿಕರು ಮುಗಿಬಿದ್ದರು   

ಕೋಲಾರ: ನಗರದ ತೋಟಗಾರಿಕೆ ಇಲಾಖೆ ನರ್ಸರಿ ಆವರಣದಲ್ಲಿ ಶುಕ್ರವಾರ ಆರಂಭವಾದ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಜನ ಸಾಗರವೇ ಹರಿದು ಬಂದಿತು.

ಪ್ರದರ್ಶನದಲ್ಲಿ ಫಲಪುಷ್ಪ ಕಲಾಕೃತಿಗಳು ನೋಡುಗರ ಗಮನ ಸೆಳೆದವು. ಗುಲಾಬಿ ಹೂವುಗಳಲ್ಲಿ ಅರಳಿದ ಸ್ವಚ್ಛ ಭಾರತದ ಪರಿಕಲ್ಪನೆ, ಸೋರೆ ಕಾಯಿಯಿಂದ ಮಾಡಿದ ತಂಬೂರಿ, ಕೊಕ್ಕರೆ, ಸಿಹಿ ಕುಂಬಳ ಕಾಯಿಯಿಂದ ಸಿದ್ಧಪಡಿಸಿದ ಶಿವಲಿಂಗ, ತಬಲ, ಮೀನು, ಬದನೆ ಕಾಯಿಗಳಿಂದ ನವಿಲು, ಹಾಗಲಕಾಯಿಯಲ್ಲಿ ಅರಳಿದ ಮೊಸಳೆ, ಸೇರಿದಂತೆ ವಿವಿಧ ತರಕಾರಿ ಕೆತ್ತನೆಗಳು ಜನರ ಮನಸೊರೆಗೊಂಡವು.

ಅಧಿಕಾರಿಗಳು, ರೈತರು, ಶಾಲಾ ಮಕ್ಕಳು, ಸಾರ್ವಜನಿಕರು ತಂಡೋಪತಂಡವಾಗಿ ಬಂದು ಪ್ರದರ್ಶನ ವೀಕ್ಷಿಸಿದರು. ಯುವಕ ಯುವತಿಯರು ಅಂದದ ಕಲಾಕೃತಿಗಳ ಎದುರು ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ADVERTISEMENT

ಸಾವಯವ ಕೃಷಿ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು, ಸಿರಿ ಧಾನ್ಯಗಳು, ಕೃಷಿ ಉಪಕರಣಗಳು, ಕೃಷಿಗೆ ಸಂಬಂಧಿಸಿದ ಪುಸ್ತಕಗಳು, ತರಕಾರಿ, ಹಣ್ಣು ಹಾಗೂ ಖಾದ್ಯಗಳಿಗೆ ಸಂಬಂಧಿಸಿದ 60ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಈ ಮಳಿಗೆಗಳು ಜನರಿಂದ ತುಂಬಿ ಹೋಗಿದ್ದವು. ಸಾರ್ವಜನಿಕರು ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನಗಳು, ಹಣ್ಣು, ತರಕಾರಿಗಳನ್ನು ಖರೀದಿಸಿದರು.

ಸಿರಿ ಧಾನ್ಯಗಳಿಂದ ತಯಾರಿಸಿದ ಪಾಯಸ, ರೊಟ್ಟಿ, ಪಾನೀಯಗಳು ನೋಡುಗರ ಬಾಯಲ್ಲಿ ನೀರೂರಿಸಿದವು. ರೇಷ್ಮೆ ಗೂಡಿನ ಅಲಂಕಾರಿಕ ವಸ್ತುಗಳ ಪ್ರದರ್ಶನ, ಹಿಪ್ಪು ನೇರಳೆ ಸಸಿಗಳ ಪ್ರಾತ್ಯಕ್ಷಿಕೆ, ಜಲಾನಯನ ಮಾದರಿ, ಕೊಳವೆ ಬಾವಿ ಮರುಪೂರಣ ಹಾಗೂ ಮಾದರಿ ಕೃಷಿ ಹೊಂಡ ಪ್ರಾತ್ಯಕ್ಷಿಕೆಯು ರೈತರನ್ನು ಆಕರ್ಷಿಸಿತು. ಮೀನುಗಾರಿಕೆ ಇಲಾಖೆಯಿಂದ ವಿವಿಧ ಬಗೆಯ ಮೀನುಗಳನ್ನು ಪ್ರದರ್ಶಿಸಲಾಯಿತು. ಮೇವು ಬೆಳೆಗಳ ಪ್ರಾತ್ಯಕ್ಷಿಕೆ, ಕೈತೋಟ ಮಾದರಿಯು ರೈತರ ಗಮನ ಸೆಳೆಯಿತು.

ವಿಶೇಷ ಮೆರುಗು: ಹಳ್ಳಿ ಸೊಗಡು ಹಾಗೂ ಸಂಕ್ರಾಂತಿಯ ಸಂಭ್ರಮ ಕಟ್ಟಿಕೊಡುವ ಮಾದರಿಯು ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಎತ್ತುಗಳು, ಪುಂಗನೂರು ತಳಿಯ ಹಸುಗಳು, ನಾಟಿ ಕೋಳಿ, ಕುರಿಗಳು, ಕೃಷಿ ಸಲಕರಣೆಗಳು ಮೇಳಕ್ಕೆ ವಿಶೇಷ ಮೆರುಗು ನೀಡಿದವು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಮೇಳದ ಸೊಬಗನ್ನು ಇಮ್ಮಡಿಗೊಳಿಸಿತು. ಶನಿವಾರ (ಜ.6) ಮತ್ತು ಭಾನುವಾರ (ಜ.7) ಪ್ರದರ್ಶನ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.