ADVERTISEMENT

ತರಕಾರಿ ವಿತರಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 6:34 IST
Last Updated 10 ಜನವರಿ 2018, 6:34 IST
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಎಪಿಎಂಸಿಯಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಗೆ ಕಡಿವಾಣ ಹಾಕಲು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದರು ತರಕಾರಿ ಇಟ್ಟು ಪ್ರತಿಭಟನೆ ನಡೆಸಿದರು
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಎಪಿಎಂಸಿಯಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಗೆ ಕಡಿವಾಣ ಹಾಕಲು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದರು ತರಕಾರಿ ಇಟ್ಟು ಪ್ರತಿಭಟನೆ ನಡೆಸಿದರು   

ಮುಳಬಾಗಿಲು: ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಚೇರಿ ಎದುರು ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಉಚಿತವಾಗಿ ತರಕಾರಿ ವಿತರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

‘ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ರೈತರಿಗೆ ತರಕಾರಿ ಮಾರುಕಟ್ಟೆ ಮಾಲೀಕರು ಹೆಚ್ಚುವರಿಯಾಗಿ ಕಮಿಷನ್ ಪಡೆದುಕೊಂಡು ಕಮೀಷನ್ ದಂಧೆ ನಡೆಸುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಹಣ ನಷ್ಟವಾಗುತ್ತಿದೆ. ಕೂಡಲೇ ಅಧಿಕಾರಿಗಳು ಕಮೀಷನ್ ದಂಧೆಗೆ ಕಡಿವಾಣ ಹಾಕಬೇಕು’ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.

ವ್ಯವಸಾಯ ಮಾಡಲು ಬಿತ್ತನೆ, ರಸ ಗೊಬ್ಬರ, ಔಷಧ ಸೇರಿದಂತೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರುವಷ್ಟರಲ್ಲಿ ರೈತ ಆಯಾಸಗೊಂಡಿರುತ್ತಾನೆ. ಇಷ್ಟಾದರೂ ಸಹ ಮಾರುಕಟ್ಟೆಯಲ್ಲಿ ತರಕಾರಿಗೆ ನಿಗದಿತ ಬೆಲೆ ಸಿಗದೆ ಬಂಡವಾಳ ಹಾಕಿದ ಹಣವೂ ಕೈ ಸೇರುವುದಿಲ್ಲ. ಮಂಡಿ ಮಾಲೀಕರು ಮಾತ್ರ 100ಕ್ಕೆ ₹ 10 ರಿಂದ 12 ಕಮಿಷನ್‌ ಪಡೆದು ರೈತರನ್ನು ಬೀದಿಪಾಲು ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕಳಪೆ ಬಿತ್ತನೆ ಬೀಜದಿಂದ ರೈತನ ಬೆಳೆ ನಷ್ಟವಾದರೆ ಅಧಿಕಾರಿಗಳು ಬೆಳೆ ಬೀಜ ತಯಾರಿಸುವ ಕಂಪನಿಯಿಂದ ತಕ್ಷಣ ರೈತರಿಗೆ ಪರಿಹಾರ ಕೊಡಿಸಬೇಕು. ಬಿತ್ತನೆ ಬೀಜ, ರಸ ಗೊಬ್ಬರ ಹಾಗೂ ಔಷಧಗಳನ್ನು ಮಾರಾಟ ಮಾಡುವ ಖಾಸಗಿ ಅಂಗಡಿಗಳಲ್ಲಿ ಖರೀದಿಸಿದ ವಸ್ತುಗಳಿಗೆ ರಸೀದಿ ನೀಡಬೇಕು. ಅಧಿಕ ಬೆಲೆಗೆ ಮಾರುವ ಅಂಗಡಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿವಿಧ ಇಲಾಖೆಗಳಿಗೆ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕೃಷಿ ಇಲಾಖೆಗೆ ಬರುವ ಕಾಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳು ಕಳಪೆ ಗುಣಮಟ್ಟ ಹೊಂದಿವೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ನೀಡುವ ಹನಿ ನೀರಾವರಿ ಮತ್ತು ಕೃಷಿ ಯಂತ್ರೋಪಕರಣಗಳು ತೀರಾ ಕಳಪೆಯಾಗಿದ್ದು, ಅಧಿಕಾರಿಗಳು ಹಗಲು ದರೋಡೆ ನಡೆಸುತ್ತಿದ್ದಾರೆ. ಸಾಮಾನ್ಯ ರೈತರಿಂದ ಲೂಟಿ ಮಾಡಲು ಮುಂದಾಗಿರುವ ಅಧಿಕಾರಿಗಳ ಕಾರ್ಯ ಚಟುವಟಿಕೆಗಳನ್ನು ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಬೀನ್ಸ್, ಸೌತೇಕಾಯಿ, ಬದನೆಕಾಯಿ, ಸಪ್ಪಳ ಬದನೆಕಾಯಿ, ಟೊಮೆಟೊ, ಮೂಲಂಗಿ, ಕೊತ್ತಂಬರಿ ಸೊಪ್ಪು, ಬಜ್ಜಿ ಮೆಣಸಿನಕಾಯಿ ಮೊದಲಾದ ತರಕಾರಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡುವ ಮೂಲಕ ಶಿರಸ್ತೇದಾರ್‌ ಗುಪ್ತ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ರೈತ ಸಂಘದ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ನಳಿನಿ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ವಿದ್ಯಾರ್ಥಿ ಮುಖಂಡ ರಂಜಿತ್‍ ಕುಮಾರ್, ಫಾರುಕ್‍ ಪಾಷಾ, ಪುಲಿಕೇಶಿ ರೆಡ್ಡಿ, ಗಜೇಂದ್ರ, ಆನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.