ADVERTISEMENT

ಒಕ್ಕಲುತನಕ್ಕೆ ಜಾತಿ, ಧರ್ಮದ ಬಣ್ಣ ಬೇಡ ಇಲ್ಲ

ಬಂಗಾರಪೇಟೆ: ಕೆಂಪೇಗೌಡ ವೃತ್ತ ಮತ್ತು ಜೋಡಿ ರಸ್ತೆ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಶಿವಕುಮಾರ್ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 7:30 IST
Last Updated 26 ಜನವರಿ 2018, 7:30 IST
ಕಾರ್ಯಕ್ರಮವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು   

ಬಂಗಾರಪೇಟೆ: ಒಕ್ಕಲುತನಕ್ಕೆ ಜಾತಿ, ಧರ್ಮವಿಲ್ಲ. ಒಕ್ಕಲುತನಕ್ಕೆ ಅವಕಾಶ ಸಿಕ್ಕಿರುವುದೇ ಭಾಗ್ಯ. ಅದಕ್ಕಾಗಿ ಹೆಮ್ಮೆ ಪಡಬೇಕೇ ಹೊರತು ಬಣ್ಣ ಹಚ್ಚುವುದು ಸರಿಯಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಪುರಸಭೆ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ವೃತ್ತ ಮತ್ತು ನಾಡ ಪ್ರಭು ಕೆಂಪೇಗೌಡ ಜೋಡಿ ರಸ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕೋಲಾರ ಜಿಲ್ಲೆ ವಿಶಿಷ್ಟ ಸ್ಥಾನ ಗಳಿಸಿದೆ. ಇಲ್ಲಿನ ಹಾಲು, ರೇಷ್ಮೆ, ತರಕಾರಿ ಸೇರಿದಂತೆ ಮಾನವ ಸಂಪನ್ಮೂಲ ಬೆಂಗಳೂರು ಅಭಿವೃದ್ಧಿಯಲ್ಲಿ ಗಣನೀಯ ಪಾತ್ರ ವಹಿಸುತ್ತಿದೆ. ಒಕ್ಕಲುತನ ಮಾಡುತ್ತಿರುವ ಒಕ್ಕಲಿಗರು ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

ಕೆಂಪೇಗೌಡ ಜಾತಿ, ಧರ್ಮದ ಎಲ್ಲೆ ಮೀರಿದವರು. ಎಲ್ಲ ವರ್ಗದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿದ್ದರು. ನಾಡಿನ ಏಳಿಗೆಗೆ ಸೊಸೆಯನ್ನು ಬಲಿ ನೀಡಿದ ಇತಿಹಾಸವಿದೆ. ಅವರ ಬಗ್ಗೆ ಸಂಶೋಧನೆ ನಡೆಸಲು ಕೆಂಪೇಗೌಡ ಪ್ರಾಧಿಕಾರ ರಚಿಸಲಾಗಿದೆ ಎಂದರು.

ಬೆಂಗಳೂರು ಪುಟ್ಟ ಪ್ರಪಂಚವಾಗಿದ್ದು, ವಿವಿಧತೆಯಲ್ಲಿ ಏಕತೆ ಸಾಧಿಸಿದೆ. ಕೆಂಪೇಗೌಡರ ದೂರದೃಷ್ಟಿ ಯೋಜನೆಗಳಿಂದಾಗಿ ಬೆಂಗಳೂರು ವಿಶ್ವದ ಗಮನ ಸೆಳೆಯುತ್ತಿದೆ. ಅವರು ಹಾಕಿದ ಭದ್ರ ಬುನಾದಿ ಇದಕ್ಕೆಲ್ಲ ಕಾರಣವಾಗಿದೆ ಎಂದು ಹೇಳಿದರು.

ಕೆ.ಸಿ. ವ್ಯಾಲಿ ಯೋಜನೆ ಬಗ್ಗೆ ಟೀಕೆ ಮಾಡುವುದು ಕೆಲವರ ಸಹಜ ಪ್ರವೃತ್ತಿಯಾಗಿದೆ. ನಿಂದಕರು ಇದ್ದಾಗ ಒಳ್ಳೆಯದರ ಮಹತ್ವ ತಿಳಿಯಲಿದೆ. ಕೆ.ಸಿ. ವ್ಯಾಲಿ ನೀರು ಸಂಸ್ಕರಣೆ ಮಾಡಿ ಕೆರೆಗಳಿಗೆ ಹರಿಸಿದರೆ ಟೀಕೆ ಮಾಡಿದವರು ಅದನ್ನು ವ್ಯವಸಾ ಯಕ್ಕೆ ಬಳಸುವುದಿಲ್ಲವೆ? ಎಂದು ಅವರು ಪ್ರಶ್ನಿಸಿದರು.

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಇವೆರಡರ ಮಧ್ಯೆ ಏನಾದರೂ ಸಾಧನೆ ಮಾಡಬೇಕು. ಇಲ್ಲಿನ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳೇ ಅವರ ಸಾಧನೆಗೆ ಸಾಟಿ. ಧರ್ಮದಿಂದಲೇ ಅವರು ಜನರ ಋಣ ತೀರಿಸುತ್ತಿದ್ದಾರೆ ಎಂದರು.

ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ಯಲುವಳ್ಳಿ ರಮೇಶ್ ಮಾತನಾಡಿ, ಕೆಂಪೇಗೌಡ ಅವರು ಒಕ್ಕಲಿಗ ಜಾತಿಯಲ್ಲಿ ಹುಟ್ಟಿದ್ದರೂ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಹೆಸರಲ್ಲಿ ನಡೆ ಯುವ ಯೋಜನೆಗಳಿಗೆ, ಅಭಿ ವೃದ್ಧಿಗೆ ಅನಗತ್ಯ ಅಡ್ಡಿ ಸರಿಯಲ್ಲ ಎಂದು ತಿಳಿಸಿದರು.

ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ವಿಕಾಸಸೌಧ ನಿರ್ಮಿಸಿದ ಕೃಷ್ಣ ಅವರು ಒಕ್ಕಲಿಗರು ಎನ್ನುವುದು ಹೆಮ್ಮೆ ವಿಚಾರ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ರಘು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೌಡೇಶ್ವರಿ, ಮುಖಂಡರಾದ ಎಂ.ಎಸ್. ಆನಂದ್, ನಂಜೇಗೌಡ ಮಾತನಾಡಿದರು. ಅತ್ಯುತ್ತಮ ಸ್ತಬ್ಧ ಚಿತ್ರಗಳಿಗೆ ಬಹುಮಾನ ನೀಡ ಲಾಯಿತು. ಪುರಸಭೆ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಆರೋಕ್ಯರಾಜನ್, ಕೆಂಪೇಗೌಡ ಪ್ರತಿಮೆ ದಾನಿ ವೈ.ಈ. ಶ್ರೀನಿವಾಸ್, ಪಾರ್ಥಸಾರಥಿ, ಶಂಷುದ್ದೀನ್‌ ಬಾಬು ಎಂ.ಆರ್. ದೇವರಾಜ್ ಭಾಗವಹಿಸಿದ್ದರು.

**

ಮಹಾನ್ ನಾಯಕರ ಜಾತಿ, ಧರ್ಮ ಹುಡುಕುವುದು ಅತ್ಯಂತ ವಿಷಾದದ ಸಂಗತಿ. ಪುತ್ಥಳಿ ಸ್ಥಾಪನೆಗಿಂತ ತತ್ವ, ಆದರ್ಶ ಪಾಲನೆ ಮುಖ್ಯ.

-ಸತೀಶ್, -ರಾಜ್ಯ ವಕ್ಕಲಿಗರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.