ADVERTISEMENT

ಎಸ್‌ಐ ಮೇಲೆ ಹಲ್ಲೆಗೆ ಯತ್ನ: ಜಿ.ಪಂ ಮಾಜಿ ಸದಸ್ಯನ ದುಂಡಾವರ್ತಿ

ಅವಾಚ್ಯ ಶಬ್ದಗಳಿಂದ ನಿಂದನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 11:52 IST
Last Updated 26 ಜನವರಿ 2018, 11:52 IST
ಎಸ್‌ಐ ಮೇಲೆ ಹಲ್ಲೆಗೆ ಯತ್ನ: ಜಿ.ಪಂ ಮಾಜಿ ಸದಸ್ಯನ ದುಂಡಾವರ್ತಿ
ಎಸ್‌ಐ ಮೇಲೆ ಹಲ್ಲೆಗೆ ಯತ್ನ: ಜಿ.ಪಂ ಮಾಜಿ ಸದಸ್ಯನ ದುಂಡಾವರ್ತಿ   

ಮಾಲೂರು: ಸಂಚಾರ ನಿಯಮ ಉಲ್ಲಂಘಿಸಿದ ಮಗನ ಪರವಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಸ್ವಾಮಿರೆಡ್ಡಿ ಮತ್ತು ಬೆಂಬಲಿಗರು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಗುರು ವಾರ ದುಂಡಾವರ್ತಿ ಪ್ರದರ್ಶಿಸಿ ಎಸ್‌ಐ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.

ರಾಮಸ್ವಾಮಿರೆಡ್ಡಿ ಅವರ ಮಗ ಶ್ರೀಧರ್‌ ಸಂಚಾರ ನಿಯಮ ಉಲ್ಲಂಘಿಸಿ ತನ್ನ ಇಬ್ಬರು ಸ್ನೇಹಿತರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ದೊಡ್ಡಶಿವಾರ ಗ್ರಾಮ ದಿಂದ ಪಟ್ಟಣದ ಕಡೆಗೆ ಬರುತ್ತಿದ್ದರು. ಈ ವೇಳೆ ಮಾರಿಕಂಭ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಎಸ್‌ಐ ಮುರಳಿ ಮತ್ತು ಸಿಬ್ಬಂದಿಯು ಅವರ ಬೈಕ್‌ ತಡೆದು, ದಂಡ ವಿಧಿಸಲು ಮುಂದಾದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶ್ರೀಧರ್‌ ಮತ್ತು ಸ್ನೇಹಿತರು ದಂಡ ಕಟ್ಟಲು ನಿರಾಕರಿಸಿದ್ದಾರೆ. ನಂತರ ಸಿಬ್ಬಂದಿಯು ಬೈಕ್‌ ವಶಕ್ಕೆ ಪಡೆದು ಆ ಮೂವರನ್ನು ಠಾಣೆಗೆ ಕರೆತಂದರು. ಈ ವಿಷಯ ತಿಳಿದ ರಾಮಸ್ವಾಮಿರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಠಾಣೆಗೆ ಬಂದು ಎಸ್‌ಐ ಮುರಳಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ADVERTISEMENT

ನಂತರ ಪರಸ್ಪರರ ಮಧ್ಯೆ ವಾಗ್ವಾದ ನಡೆದು ರಾಮಸ್ವಾಮಿರೆಡ್ಡಿ, ಮುರಳಿಯವರ ಶರ್ಟ್‌ನ ಕೊರಳ ಪಟ್ಟಿ ಹಿಡಿದು ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ, ಮುರಳಿಯವರ ರಕ್ಷಣೆಗೆ ಧಾವಿಸಿದ ಸಿಬ್ಬಂದಿ ಮೇಲೂ ಹಲ್ಲೆಗೆ ಮಾಡಲೆತ್ನಿಸಿದ್ದಾರೆ. ಅದೇ ವೇಳೆಗೆ ಠಾಣೆಗೆ ಬಂದ ಇನ್‌ಸ್ಪೆಕ್ಟರ್‌ ಸತೀಶ್‌, ಎಸ್‌ಐ ಮತ್ತು ರಾಮಸ್ವಾಮಿರೆಡ್ಡಿ ಅವ ರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬಂಧನಕ್ಕೆ ಒತ್ತಾಯ: ಮುರಳಿ ಅವರು ತಿಗಳ ಸಮುದಾಯದವರು. ಠಾಣೆಯಲ್ಲಿ ನಡೆದ ರಂಪಾಟ ತಿಳಿದ ತಿಗಳ ಸಮುದಾಯದ ಜನ ಠಾಣೆ ಎದುರು ಜಮಾಯಿಸಿ, ರಾಮಸ್ವಾಮಿರೆಡ್ಡಿ ಮತ್ತು ಬೆಂಬಲಿಗರನ್ನು ಬಂಧಿಸುವಂತೆ ಧರಣಿ ಕುಳಿತರು. ಇದರಿಂದ ಆತಂಕದ ವಾತಾವರಣ ಸೃಷ್ಟಿಯಾಯಿತು. ಬಳಿಕ ಸಮುದಾಯದ ಮುಖಂಡರು ಮಧ್ಯ ಪ್ರವೇಶಿಸಿ ಧರಣಿನಿರತರನ್ನು ಸಮಾಧಾನಪಡಿಸಿದರು.

ಆ ನಂತರ ಪೊಲೀಸರು ರಾಮಸ್ವಾಮಿರೆಡ್ಡಿ ಮತ್ತು ಅವರ ಮಗನಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.