ADVERTISEMENT

ಹಾಳಾದ ರಸ್ತೆ; ಸಂಚಾರಕ್ಕೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 9:19 IST
Last Updated 7 ಫೆಬ್ರುವರಿ 2018, 9:19 IST

ನಂಗಲಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರಿಂದ ಉಪ್ಪರಹಳ್ಳಿ ಮೂಲಕ ನಗವಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ಸುಮಾರು ಆರು ವರ್ಷಗಳ ಹಿಂದೆ ರಸ್ತೆಗೆ ಡಾಂಬರ್‌ ಹಾಕಲಾಗಿತ್ತು. ನಂತರ ಅದರ ನಿರ್ವಹಣೆ ಮಾಡಿಲ್ಲ. ವಾಹನಗಳ ಓಡಾಟದ ದಟ್ಟಣೆಯಿಂದ ರಸ್ತೆಯುದ್ದಕ್ಕೂ ಡಾಂಬರ್‌ ಕಿತ್ತು ಹೋಗಿದೆ. ದೊಡ್ಡ ಗುಂಡಿಗಳು ಬಿದ್ದು, ಜಲ್ಲಿ ಕಲ್ಲುಗಳು ಹೊರ ಬಂದಿವೆ. ವಾಹನಗಳ ಸವಾರರು ರಸ್ತೆಯಲ್ಲಿ ಸಾಗುವುದಕ್ಕೆ ಆತಂಕ ಪಡುವರು. ರಸ್ತೆ ದಾಟಿ ತಮ್ಮೂರು ಮುಟ್ಟುವ ಮುನ್ನ ಪ್ರಾಣ ಅಂಗೈಯಲ್ಲಿ ಇಟ್ಟುಕೊಂಡು ಸಾಗಬೇಕಾಗಿದೆ.

ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಿ ಮುಂದೆ ಸಾಗುವುದೇ ವಾಹನ ಚಾಲಕರಿಗೆ ದೊಡ್ಡ ಸವಾಲಾಗಿದೆ. ಮಹಿಳೆಯರು, ವೃದ್ಧರು ಮಕ್ಕಳು ಕಿರಿಕಿರಿ ಅನುಭವಿಸುವರು. ಸ್ವಲ್ಪ ನಿಯಂತ್ರಣ ತಪ್ಪಿದರೂ ವಾಹನ ಗುಂಡಿಯೊಳಗೆ ಇಳಿದು, ಅಪಘಾತ ಸಂಭವಿಸುವುದು ನಿಶ್ಚಿತ ಎನ್ನುವ ಸ್ಥಿತಿ ಇಲ್ಲಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪರಹಳ್ಳಿವರೆಗಿನ ರಸ್ತೆಯಲ್ಲಿ ಗುಂಡಿ ಮುಚ್ಚಲು ಮಣ್ಣು ತುಂಬಲಾಗಿದೆ. ವಾಹನಗಳ ಓಡಾಟಕ್ಕೆ ಮಣ್ಣು ಹುಡಿಯೆದ್ದು ಮತ್ತಷ್ಟು ತೊಂದರೆ ಆಗುತ್ತಿದೆ. ಮಣ್ಣು, ಕಲ್ಲಿನ ಸಣ್ಣ ಚೂರುಗಳು ಕಣ್ಣಿಗೆ ಬೀಳುವುದು ಮಳೆಗಾಲದಲ್ಲಂತೂ ರಸ್ತೆ ಕೆಸರು ಮಯವಾಗಿರ್ತದೆ. ಇದೇ ಸ್ಥಿತಿ ಉಪ್ಪರ ಹಳ್ಳಿಯಿಂದ ನಗವಾರದ ವರೆಗಿನ ರಸ್ತೆಯಲ್ಲೂ ಇದೆ. ದೊಡ್ಡ ಗುಂಡಿ ತಪ್ಪಿಸಲು ಹೋಗಿ ಕಾರು, ಟ್ರಾಕ್ಟರ್‌, ಆಟೋಗಳು ಅಪಘಾತಕ್ಕೀಡಾಗಿವೆ. ಅಲ್ಲದೆ ವಾಹನಕ್ಕೆ ಧಕ್ಕೆ ಆಗುವ ಭಯ ಕಾಡುತ್ತದೆ ಎನ್ನುತ್ತಾರೆ ವಾಹನ ಸವಾರ ಜಗದೀಶ್ವರ್.

ನಾಲ್ಕು ಕಿಲೋ ಮೀಟರ್ ರಸ್ತೆ ಹಾಳಾಗಿ ವರ್ಷಗಳೇ ಕಳೆದಿವೆ. ರಸ್ತೆ ದುರಸ್ತಿ ಮಾಡಿಸುವಂತೆ ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಇದುವರೆಗೆ ಯಾರೊಬ್ಬರೂ ಸಮಸ್ಯೆ ಪರಿಹಾರಕ್ಕೆ ಗಮನ ನೀಡುತ್ತಿಲ್ಲ ಎಂದು ಬ್ಯಾಟನೂರು ಗ್ರಾಮದ ಸೋಮು ದೂರಿದರು.

ನಾಮ ಫಲಕವೂ ಇಲ್ಲ: ಹೆದ್ದಾರಿಯಿಂದ ಉಪ್ಪರಹಳ್ಳಿ, ಬ್ಯಾಟನೂರು, ನಗವಾರ, ಗುಂಡಿಗಲ್ಲು, ಚಿಕ್ಕನಗವಾರ ಗ್ರಾಮಗಳಿಗೆ ಮಾರ್ಗ ತೋರಿಸುವ ನಾಮಫಲಕಗಳೂ ಇಲ್ಲ. ಇನ್ನು ಕೆಲವು ಕಡೆ ಸ್ಪಷ್ಟವಾಗಿ ಕಾಣುತ್ತಿಲ್ಲ. ಇರುವುದರಿಂದ ಹೊಸದಾಗಿ ಬರುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.