ADVERTISEMENT

ಟಿಕೆಟ್‌ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 9:55 IST
Last Updated 19 ಫೆಬ್ರುವರಿ 2018, 9:55 IST
ಕೆ.ಶ್ರೀನಿವಾಸಗೌಡ.
ಕೆ.ಶ್ರೀನಿವಾಸಗೌಡ.   

ಕೋಲಾರ: ಬೆಂಗಳೂರಿನಲ್ಲಿ ನಡೆದ ‘ಜೆಡಿಎಸ್ ವಿಕಾಸ ಪರ್ವ’ ಸಮಾವೇಶದಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡದ ಕಾರಣ ಜೆಡಿಎಸ್‌ ಮುಖಂಡ ಕೆ.ಶ್ರೀನಿವಾಸಗೌಡ ಬೆಂಬಲಿಗರಲ್ಲಿ ಗೊಂದಲ ಉಂಟಾಗಿದೆ.

ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಹೆಸರು ಪಟ್ಟಿಯಲ್ಲಿ ಇಲ್ಲದೆ ಇರುವುದಕ್ಕೆ ಅಭಿಮಾನಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಅಭ್ಯರ್ಥಿಯಾಗಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಲೂರು ಕ್ಷೇತ್ರಕ್ಕೆ   ಶಾಸಕ ಕೆ.ಎಸ್.ಮಂಜುನಾಥ್‌ಗೌಡ, ಕೆಜಿಎಫ್ ಗೆ  ಮಾಜಿ ಶಾಸಕ ಭಕ್ತವತ್ಸಲಂ, ಮುಳಬಾಗಿಲಿಗೆ  ಸಮೃದ್ಧಿ ಮಂಜುನಾಥ್ ಹಾಗೂ ಬಂಗಾರಪೇಟೆಗೆ  ಮಲ್ಲೇಶ್‌ಬಾಬು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ADVERTISEMENT

ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ.ಶ್ರೀನಿವಾಸಗೌಡರ ಹೆಸರು ಘೋಷಣೆಯಾಗುತ್ತದೆ ಎಂದು ಬೆಂಬಲಿಗರು ನಿರೀಕ್ಷೆಯಲ್ಲಿದ್ದರು. ಅವರ ನಿರೀಕ್ಷೆ ಹುಸಿಯಾಗಿದ್ದು, ಶ್ರೀನಿವಾಸಗೌಡರ ಮುಂದಿನ ತೀರ್ಮಾನಕ್ಕೆ ಕಾಯುತ್ತಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಭಾನುವಾರ ನಡೆದ ಬೆಂಬಲಿಗರ ಗುಪ್ತ ಸಭೆಯಲ್ಲಿ  ಶ್ರೀನಿವಾಸಗೌಡ ಮಾತನಾಡಿ, ‘ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಕ್ಕೂ ಸಿದ್ಧವಾಗಿದ್ದೇನೆ’ ಎಂದು ತಿಳಿಸಿದರು.

ಕಾದು ನೋಡೋಣ: ಚುನಾವಣೆಗೆ ನಿಲ್ಲುವುದು ಶತಸಿದ್ದ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಲ್ಲಾ ಕಾರ್ಯಕರ್ತರು, ಮುಖಂಡರು ತಯಾರಾಗಬೇಕು. ಮುಂದಿನ ವಾರದಿಂದ ಹೋಬಳಿಮಟ್ಟದಿಂದ ಸಭೆಗಳನ್ನು ನಡೆಸಿ ನಂತರ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಮತಯಾಚಿಸುವುದಾಗಿ ತಿಳಿಸಿದರು.

’ಈಗಾಗಲೇ ಮೂರು ಬಾರಿ ಶಾಸಕನಾಗಿ ಅನೇಕ ಸೇವೆ ಸಲ್ಲಿಸಿರುವ ತಮಗೆ ರಾಜಕೀಯದಲ್ಲಿ ಸಾಕಷ್ಟು ಅನುಭವವಿದೆ. ಜೆಡಿಎಸ್ ಪಕ್ಷದಿಂದಲೇ ಟಿಕೆಟ್ ಸಿಗುವ ಸಾಧ್ಯತೆಗಳೂ ಇದ್ದು, ಶನಿವಾರ ನಡೆದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಘೋಷಣೆ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಘೋಷಣೆ ಮಾಡಿಲ್ಲ. ಈಗಲೇ ಆತುರಪಡುವುದು ಬೇಡ. ಟಿಕೆಟ್ ಘೋಷಣೆಯಾಗುವವರೆಗೂ ಕಾದು ನೋಡೋಣ’ ಎಂದು ಹೇಳಿದರು.

ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ: ಪಕ್ಷದ ನಡೆಗೆ ಅಸಮಧಾನ ವ್ಯಕ್ತಪಡಿಸಿದ  ಬೆಂಬಲಿಗರು, ಸಭೆಯಿಂದಲೇ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ದೂರವಾಣಿ ಕರೆ ಮಾಡಿದರು. ’ಇಷ್ಟೆಲ್ಲ ಅನ್ಯಾಯವಾಗಿದ್ದರೂ ನೀವು ಯಾಕೆ ಕೇಳುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ತಮಗೂ ಈ ಬಗ್ಗೆ ಬೇಸರವಿದೆ. ಮಾಜಿ ಸಚಿವರು ನಮ್ಮ ನಾಯಕರಾಗಿದ್ದು, ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಟಿಕೆಟ್ ಘೋಷಣೆಗೆ ಕ್ರಮಕೈಗೊಳ್ಳಲಾಗುವುದು. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ’ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.

’ಜೆಡಿಎಸ್ ಪಕ್ಷದಲ್ಲಿ ನಿಮಗೆ ಟಿಕೆಟ್ ಸಿಗಲಿಲ್ಲವೆಂದರೆ ನೀವು ಹೇಳಿದವರ ಪರ ಕೆಲಸ ಮಾಡುತ್ತೇವೆ’ ಎಂದು ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಬೆಂಬಲಿಗರು ಶ್ರೀನಿವಾಸಗೌಡರಿಗೆ ಹೇಳಿದರು.

ಮಧ್ಯಪ್ರವೇಶ ಮಾಡಿದ ಶ್ರೀನಿವಾಸಗೌಡ, ‘ಪಕ್ಷದ ವರಿಷ್ಠರು ಇನ್ನೂ ಟಿಕೆಟ್ ಕುರಿತಾಗಿ ತೀರ್ಮಾನ ಕೈಗೊಂಡಿಲ್ಲ. ನಾವೂ ಆತುರಪಡುವುದು ಬೇಡ. ಒಂದು ವೇಳೆ ಸಿಗಲಿಲ್ಲವೆಂದರೆ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳೋಣ’ ಎಂದು ಹೇಳಿದರು.

ಟಿಎಪಿಎಂಎಸ್ ಅಧ್ಯಕ್ಷ ಸೋಮಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲ್, ಕಾರ್ಯಾಧ್ಯಕ್ಷ ಅನ್ವರ್ ಪಾಷ, ಮುಖಂಡರಾದ ವೆಂಕಟೇಶಪ್ಪ, ಎಚ್.ಲೋಕೇಶ್, ಕೆ.ಟಿ.ಅಶೋಕ್, ಅಶ್ವಥ್, ನಾಗೇಶ್, ಎಸ್.ಕೆ.ಚಂದ್ರಶೇಖರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.