ADVERTISEMENT

ಸರ್ಕಾರಿ ಗೋಮಾಳ ಒತ್ತುವರಿ: ಗ್ರಾ.ಪಂ ಮಾಜಿ ಸದಸ್ಯನ ವಿರುದ್ಧ ಪ್ರಕರಣ

ಮಂಗಸಂದ್ರ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಒತ್ತುವರಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 17:37 IST
Last Updated 14 ಅಕ್ಟೋಬರ್ 2020, 17:37 IST
ಎಂ.ಆರ್‌.ರವಿಕುಮಾರ್‌
ಎಂ.ಆರ್‌.ರವಿಕುಮಾರ್‌   

ಕೋಲಾರ: ತಾಲ್ಲೂಕಿನ ಮಂಗಸಂದ್ರ ಗ್ರಾಮದಲ್ಲಿನ ಸರ್ಕಾರಿ ಗೋಮಾಳದ ಜಮೀನು ಒತ್ತುವರಿ ಮಾಡಿದ ಆರೋಪದ ಮೇಲೆ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಸೇರಿದಂತೆ 5 ಮಂದಿ ವಿರುದ್ಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಅರಾಭಿಕೊತ್ತನೂರು ಗ್ರಾ.ಪಂ ಮಾಜಿ ಸದಸ್ಯ ವಿ.ಕೆಂಚೇಗೌಡ, ಅವರ ಸಂಬಂಧಿಗಳಾದ ಎಂ.ವಿ.ನಾರಾಯಣಸ್ವಾಮಿ, ಕೆ.ವಿ.ಕೃಷ್ಣಮೂರ್ತಿ, ಈ ಹಿಂದೆ ಅರಾಭಿಕೊತ್ತನೂರು ಪಿಡಿಒ ಆಗಿದ್ದ ಸತೀಶ್‌ಕುಮಾರ್‌ (ನಿಧನರಾಗಿದ್ದಾರೆ) ಮತ್ತು ಮಾರ್ಜೇನಹಳ್ಳಿ ಪಿಡಿಒ ಕಮಲಾ ಅವರ ವಿರುದ್ಧ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಎನ್‌.ವಿ.ಬಾಬು ದೂರು ದಾಖಲಿಸಿದ್ದಾರೆ.

ಕೆಂಚೇಗೌಡ ಅವರು ಈ ಹಿಂದೆ ಅರಾಭಿಕೊತ್ತನೂರು ಗ್ರಾ.ಪಂ ಸದಸ್ಯರಾಗಿದ್ದ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಗೋಮಾಳದ ಜಮೀನನ್ನು ನಿವೇಶನವಾಗಿ ಪರಿವರ್ತಿಸಿ ಖಾತೆ ಮಾಡಿಸಿಕೊಂಡಿದ್ದರು. ಅಲ್ಲದೇ, ನಾರಾಯಣಸ್ವಾಮಿ ಮತ್ತು ಕೃಷ್ಣಮೂರ್ತಿ ಅವರ ಹೆಸರಿಗೂ ನಿವೇಶನದ ಖಾತೆ ಮಾಡಿಸಿದ್ದರು.

ADVERTISEMENT

ಆಗ ಪಿಡಿಒ ಆಗಿದ್ದ ಸತೀಶ್‌ಕುಮಾರ್‌ ಅವರು ಜಮೀನಿನ ಮೂಲ ದಾಖಲೆಪತ್ರ ಮತ್ತು ಸ್ವಾಧೀನದ ಹಕ್ಕುದಾರಿಕೆಯ ದಾಖಲೆಪತ್ರ ಪರಿಶೀಲಿಸದೆ ಈ 3 ಮಂದಿಯ ಹೆಸರಿಗೆ ನಿವೇಶನದ ಖಾತೆ ಮಾಡಿಕೊಟ್ಟಿದ್ದರು. ಈ ಅಕ್ರಮ ಬಯಲಾದ ನಂತರ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಆದೇಶದಂತೆ 2019ರ ಆಗಸ್ಟ್‌ನಲ್ಲಿ ಮೂರೂ ಮಂದಿಯ ನಿವೇಶನದ ಖಾತೆ ರದ್ದುಪಡಿಸಲಾಗಿತ್ತು. ಅಲ್ಲದೇ, ಒತ್ತುವರಿಯಾಗಿದ್ದ ಜಮೀನನ್ನು ಗ್ರಾ.ಪಂ ವತಿಯಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಪತ್ನಿಯ ನೆರವು: ಕೆಂಚೇಗೌಡರ ಅಧಿಕಾರಾವಧಿ ಮುಗಿದ ನಂತರ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಅವರ ಪತ್ನಿ ಸವಿತಾ ಅವರು ಗೆಲುವು ಸಾಧಿಸಿ ಅರಾಭಿಕೊತ್ತನೂರು ಗ್ರಾ.ಪಂಗೆ ಅಧ್ಯಕ್ಷರಾದರು. ಸವಿತಾ ಅವರ ಅಧಿಕಾರಾವಧಿಯಲ್ಲಿ 2019ರ ಸೆಪ್ಟೆಂಬರ್‌ನಲ್ಲಿ ಕೆಂಚೇಗೌಡರು ತಮ್ಮ ಪ್ರಭಾವ ಬಳಸಿ ಮತ್ತೊಮ್ಮ ಗೋಮಾಳದ ಜಾಗವನ್ನು ಖಾತೆ ಮಾಡಿಸಿಕೊಂಡಿದ್ದರು. ನಿಯಮಬಾಹಿರವಾಗಿ ಅನುಬಂಧ 1 ಮತ್ತು ಅನುಬಂಧ 9ರಲ್ಲಿ ದಾಖಲೆಪತ್ರ ನೀಡಲಾಗಿತ್ತು. ಆ ನಂತರ ಮತ್ತೊಮ್ಮೆ ಎಲ್ಲರ ಖಾತೆ ರದ್ದುಪಡಿಸಲಾಗಿತ್ತು.

ಬಳಿಕ ಕೆಂಚೇಗೌಡರು ಪತ್ನಿಯ ನೆರವಿನಿಂದ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಿರುವಂತೆ ನಡಾವಳಿ ಸೃಷ್ಟಿಸಿ ಗೋಮಾಳದ ಜಾಗಕ್ಕೆ ಪುನಃ ಖಾತೆ ಮಾಡಿಸಿಕೊಂಡಿದ್ದರು. ಈ ಅಕ್ರಮಕ್ಕಾಗಿ ಆಗಿನ ಪಿಡಿಒ ಕಮಲಾ ಅವರ ಮೇಲೆ ಒತ್ತಡ ಹೇರಿದ್ದರು.

ಜಮೀನಿಗೆ ಚರಂಡಿ ಕಲ್ಲು: ಸರ್ಕಾರದ ಅನುದಾನದಲ್ಲಿ ಮಂಗಸಂದ್ರ ಗ್ರಾಮದಲ್ಲಿ ನಿರ್ಮಿಸಿದ್ದ ಚರಂಡಿಯನ್ನು ನಾಶಪಡಿಸಿ ಅದರ ಕಲ್ಲುಗಳನ್ನು ಕೆಂಚೇಗೌಡರು ತಾವು ಒತ್ತುವರಿ ಮಾಡಿದ್ದ ಗೋಮಾಳದ ಜಮೀನಿಗೆ ನೆಡಿಸಿದ್ದರು. ಅಲ್ಲದೇ, ಮಂಗಸಂದ್ರ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವ ಉದ್ದೇಶಕ್ಕಾಗಿ 2017ರಲ್ಲಿ ನರೇಗಾ ಅಡಿ ಮಂಜೂರಾಗಿದ್ದ 2 ತೊಟ್ಟಿಗಳ ಪೈಕಿ ಒಂದು ತೊಟ್ಟಿಯನ್ನು ಕೆಂಚೇಗೌಡರು ತಮ್ಮ ಸ್ವಂತ ಜಮೀನಿನಲ್ಲಿ ನಿರ್ಮಾಣ ಮಾಡಿಸಿಕೊಂಡಿದ್ದರು.

ಈ ಎಲ್ಲಾ ಅಕ್ರಮಗಳಲ್ಲಿ ಪಿಡಿಒ ಕಮಲಾ ಅವರು ಕೆಂಚೇಗೌಡರಿಗೆ ನೆರವು ನೀಡಿದ್ದರು. ಕೆಂಚೇಗೌಡರು ಸಾರ್ವಜನಿಕ ಆಸ್ತಿ ನಾಶಪಡಿಸಿ ಗ್ರಾ.ಪಂಗೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಪರಾಧ ಸಂಚು, ವಂಚನೆ ಮತ್ತು ನಕಲಿ ದಾಖಲೆಪತ್ರ ಸೃಷ್ಟಿ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.