ADVERTISEMENT

ಪರ–ವಿರೋಧ ಅಭಿಪ್ರಾಯ: ಕೋಚಿಮುಲ್‌ ವಿಭಜನೆ ಬಗ್ಗೆ ಕಾವೇರಿದ ಚರ್ಚೆ

ಗೊಂದಲದ ಗೂಡಾದ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 14:21 IST
Last Updated 27 ಅಕ್ಟೋಬರ್ 2021, 14:21 IST

ಕೋಲಾರ: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬುಧವಾರ ನಡೆದ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಸಾಮಾನ್ಯ ಸಭೆಯಲ್ಲಿ ಒಕ್ಕೂಟದ ವಿಭಜನೆ ಸಂಬಂಧ ಕಾವೇರಿದ ಚರ್ಚೆ ನಡೆಯಿತು.

ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ವಿಡಿಯೋ ಸಂವಾದದ ಮೂಲಕ ನಡೆದ ಸಭೆಯಲ್ಲಿ ಒಕ್ಕೂಟದ ವಿಭಜನೆ ಸಂಬಂಧ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗಿ ಸಭೆ ಗೊಂದಲದ ಗೂಡಾಯಿತು. ಕೋಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಹಲವರು ಬಹಿಷ್ಕರಿಸಿದರು. ಗೊಂದಲ, ಗದ್ದಲದ ನಡುವೆ ಸಭೆಯಲ್ಲಿ ಹಲವು ವಿಷಯಗಳನ್ನು ಅಂಗೀಕರಿಸಲಾಯಿತು.

ಸಭೆಯಲ್ಲಿ ವಾದಕ್ಕಿಳಿದ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿನಿಧಿಗಳು, ‘2015ರಲ್ಲೇ ಒಕ್ಕೂಟದ ವಿಭಜನೆಗೆ ಅನುಮೋದನೆ ನೀಡಿದರೂ ಈವರೆಗೂ ವಿಭಜನೆ ಮಾಡಿಲ್ಲ. ಒಕ್ಕೂಟವನ್ನು ಕೂಡಲೇ ವಿಭಜನೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಇದಕ್ಕೆ ವಿರುದ್ಧವಾಗಿ ಮಾತಿಗಿಳಿದ ಕೋಲಾರ ಜಿಲ್ಲೆಯ ಪ್ರತಿನಿಧಿಗಳು, ‘ನಮ್ಮ ಜಿಲ್ಲೆಯಲ್ಲಿ ಡೇರಿಯು ಹಳೆಯ ಕಟ್ಟಡದಲ್ಲಿದೆ. ಚಿಕ್ಕಬಳ್ಳಾಪುರದ ಮಾದರಿಯಲ್ಲಿ ಜಿಲ್ಲೆಯಲ್ಲೂ ಮೆಗಾ ಡೇರಿ ಕಟ್ಟಡ ನಿರ್ಮಿಸುವವರೆಗೂ ಒಕ್ಕೂಟ ವಿಭಜನೆ ಮಾಡಬಾರದು’ ಎಂದು ಒತ್ತಾಯಿಸಿದರು.

ಖರೀದಿ ದರ ಕಡಿಮೆ: ‘ಕೋಲಾರ ಜಿಲ್ಲೆಯಲ್ಲಿ ಮೆಗಾ ಡೇರಿ ಕಾಮಗಾರಿಯನ್ನು 2013ರಲ್ಲಿ ಆರಂಭಿಸಿ 2018ರೊಳಗೆ ಪೂರ್ಣಗೊಳಿಸಲು ₹ 51 ಕೋಟಿ ಅಂದಾಜು ವೆಚ್ಚಕ್ಕೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿತ್ತು. ಇದೀಗ ಸಿವಿಲ್ ಕಾಮಗಾರಿ, ಫ್ಲೆಕ್ಸಿ ಘಟಕ, ಪನ್ನೀರ್‌ ಘಟಕ, ಯಂತ್ರೋಪಕರಣಗಳನ್ನು ಯೋಜನೆಯಲ್ಲಿ ಸೇರ್ಪಡೆ ಮಾಡಲು ಹೆಚ್ಚುವರಿಯಾಗಿ ₹ 138 ಕೋಟಿಗೆ ಅನುಮೋದನೆ ನೀಡುವ ಉದ್ದೇಶವಾದರೂ ಏನು?’ ಎಂದು ನುಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎನ್.ಎನ್‌.ಶ್ರೀರಾಮ್ ಪ್ರಶ್ನಿಸಿದರು.

‘ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಹಾಲು ಉತ್ಪಾದಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಸಂಕಷ್ಟದ ಪರಿಸ್ಥಿತಿಯಲ್ಲೂ ಒಕ್ಕೂಟವು ಹಾಲು ಖರೀದಿ ದರ ಕಡಿಮೆ ಮಾಡಿದೆ. ಪಶು ಆಹಾರದ ಬೆಲೆ ಏಕೆ ಇಳಿಸಿಲ್ಲ. ಡೇರಿ ಅಧ್ಯಕ್ಷರಿಗೆ ವರ್ಷದಲ್ಲಿ ಒಂದು ಬಾರಿ ಮಾತ್ರ ಸಭೆಯಲ್ಲಿ ಮಾತಾಡುವ ಅವಕಾಶವಿರುತ್ತದೆ. ಆದರೆ, ಇಲ್ಲಿ ನಮಗೆ ಸರಿಯಾದ ಮಾಹಿತಿ ಕೊಡುವುದಿಲ್ಲ. ನಾವು ಎಲ್ಲಿ ಮಾಹಿತಿ ಪಡೆಯಬೇಕು’ ಎಂದು ಒಕ್ಕೂಟದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನು ಪ್ರಶ್ನಿಸಿದರು.

‘ಒಕ್ಕೂಟದಲ್ಲಿ ಅಕ್ರಮಗಳು ನಡೆಯುತ್ತಿದ್ದು, ನಿರ್ದೇಶಕರು ಈ ಬಗ್ಗೆ ಯಾಕೆ ಮೌನವಾಗಿದ್ದೀರಿ. ವಿಡಿಯೋ ಸಂವಾದದ ಮೂಲಕ ಏಕಕಾಲದಲ್ಲಿ ಸಭೆ ನಡೆಯುತ್ತಿರುವುದರಿಂದ ಯಾರಿಗೂ ಸರಿಯಾಗಿಮಾತನಾಡಲು ಅವಕಾಶ ಸಿಗುತ್ತಿಲ್ಲ. ಕೆಲ ತಾಲ್ಲೂಕುಗಳ ಅಧ್ಯಕ್ಷರಿಗೆ ಸಭೆಯಲ್ಲಿ ಮಾತನಾಡಲು ಆಗುತ್ತಲೇ ಇಲ್ಲ. ಇಂತಹ ಸಭೆ ನಡೆಸಿ ಏನು ಪ್ರಯೋಜನ’ ಎಂದು ಅಸಮಾಧಾನ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿದರು.

ಕೋಚಿಮುಲ್ ನಿರ್ದೇಶಕರಾದ ಡಿ.ವಿ.ಹರೀಶ್‌, ಹನುಮೇಶ್, ಆದಿನಾರಾಯಣರೆಡ್ಡಿ, ಕಾಂತಮ್ಮ, ವ್ಯವಸ್ಥಾಪಕ ನಿರ್ದೇಶಕ ಎಚ್.ಮಹೇಶ್, ಅಧಿಕಾರಿಗಳು ಹಾಗೂ ವಿವಿಧ ಸಂಘಗಳ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.