ADVERTISEMENT

ಹನಿಮೂನ್‌ ಗೊತ್ತಾ: ವಿದ್ಯಾರ್ಥಿನಿಗೆ ಅಶ್ಲೀಲ ಪ್ರಶ್ನೆ– ಶಿಕ್ಷಕನಿಗೆ ಧರ್ಮದೇಟು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 16:14 IST
Last Updated 7 ಡಿಸೆಂಬರ್ 2022, 16:14 IST
   

ನರಸಾಪುರ (ಕೋಲಾರ): ‘ಹನಿಮೂನ್‌ ಅರ್ಥ ಗೊತ್ತಾ’ ಎಂದು ವಿದ್ಯಾರ್ಥಿನಿಗೆ ಪ್ರಶ್ನೆ ಕೇಳಿದ್ದ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪದ ಮೇಲೆ ನರಸಾಪುರದ ಕರ್ನಾಟಕ ‍ಪಬ್ಲಿಕ್‌ ಶಾಲೆಯ (ಕೆಪಿಎಸ್‌) ಶಿಕ್ಷಕರೊಬ್ಬರಿಗೆ ಬುಧವಾರ ಗ್ರಾಮಸ್ಥರು ಹಾಗೂ ಪೋಷಕರು ಧರ್ಮದೇಟು ನೀಡಿದ್ದಾರೆ.

ಆರೋಪಿ, ಪ್ರೌಢಶಾಲೆಯ ಕನ್ನಡ ಸಹಶಿಕ್ಷಕ ಸಿ.ಎಂ.ಪ್ರಕಾಶ್ ಎಂಬುವರನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಅಮಾನತುಗೊಳಿಸಿದ್ದಾರೆ.

ಕೋಲಾರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕನ್ನಯ್ಯ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರು, ಪೋಷಕರು ಹಾಗೂ ಮಕ್ಕಳಿಂದ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿ ಡಿಡಿಪಿಐಗೆ ವರದಿ ನೀಡಿದ್ದಾರೆ.

ADVERTISEMENT

‘10ನೇ ತರಗತಿಯ ವಿದ್ಯಾರ್ಥಿನಿಯೊಬ್ಬರಿಗೆ ವಾಟ್ಸ್‌ಆ್ಯಪ್‌ನಲ್ಲಿ ‘ಏನು ಮಾಡುತ್ತಿದ್ದೀಯಾ? ಎಲ್ಲಿದ್ದೀಯಾ? ಚೆನ್ನಾಗಿ ಎಂಜಾಯ್‌ ಮಾಡು’ ಎಂಬಿತ್ಯಾದಿ ಸಂದೇಶ ಕಳುಹಿಸಿದ್ದಾರೆ. ಅಲ್ಲದೇ, ಮೈಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡು ಬರೆದುಕೊಟ್ಟಿದ್ದಾರೆ. ಶಾಲೆ ಬಳಿ ಬಂದು ಪೋಷಕರು ಹಾಗೂ ಗ್ರಾಮಸ್ಥರು ಬಿಇಒ ಎದುರೇ ಶಿಕ್ಷಕನಿಗೆ ತರಾಟೆ ತೆಗೆದುಕೊಂಡಿದ್ದಾರೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಆರೋಪಿ ಶಿಕ್ಷಕ ಈ ಹಿಂದೆ ಕಾರ್ಯನಿರ್ವಹಿಸಿದ ಸ್ಥಳಗಳಲ್ಲಿಯೂ ಅನುಚಿತವಾಗಿ ವರ್ತಿಸಿ ಅಮಾನತುಗೊಂಡಿದ್ದರು ಎಂಬುದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆ ನಡೆಸಿದ್ದು, ಶಿಕ್ಷಕ ತನ್ನ ತಪ್ಪುಒಪ್ಪಿಕೊಂಡಿದ್ದಾನೆ. ಹೀಗಾಗಿ, ಅಮಾನತುಗೊಳಿಸಿದ್ದೇವೆ. ತನಿಖೆ ಮುಂದುವರಿಯಲಿದೆ
- ಕೃಷ್ಣಮೂರ್ತಿ, ಡಿಡಿಪಿಪಿ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.