ಕೋಲಾರ: ‘ಪರಿಶಿಷ್ಟ ಜಾತಿಯೊಳಗೆ ಒಳಮೀಸಲು ಕಲ್ಪಿಸಬೇಕೆಂಬ ಎಡಗೈ ಸಮುದಾಯದವರ 35 ವರ್ಷಗಳ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದೆ. ಒಳಮೀಸಲಿಗೆ ಮಂತ್ರಿಮಂಡಲ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಎಲ್ಲ ಹೋರಾಟಗಾರರಿಗೂ ಪಕ್ಷದಿಂದ ಧನ್ಯವಾದಗಳು’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಜಿಲ್ಲಾ ಅಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ತಿಳಿಸಿದ್ದಾರೆ.
‘ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಅಳವಡಿಸದ ಕಾರಣ ಅಲೆಮಾರಿ ಹಾಗೂ ಇನ್ನಿತರ ಧ್ವನಿ ಇಲ್ಲದ ಸಣ್ಣ ಸಣ್ಣ ಜಾತಿಗಳಿಗೆ ಒಳ ಮೀಸಲಾತಿಯ ಲಾಭ ಸರಿಯಾಗಿ ದಕ್ಕುವುದಿಲ್ಲವೆಂಬ ಭಾವನೆಯೂ ಇದೆ’ ಎಂದಿದ್ದಾರೆ.
‘ಮುಂಬರುವ ದಿನಗಳಲ್ಲಿ ಬಾಕಿ ಇರುವ ಎಲ್ಲ ನೇಮಕಾತಿಗಳು, ಮುಂಬಡ್ತಿಗಳು ವೇಗದಲ್ಲಿ ಆಗಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಬಲೀಕರಣಗೊಳ್ಳಲು ಸರ್ಕಾರವು ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರಲು ಬಳಸಬೇಕಿದೆ. ಈ ಸಮಾಜದ ಮಕ್ಕಳಿಗೆ ಗುಣಮಟ್ಟದ ಆಧುನಿಕ ಸರ್ಕಾರಿ ಶಿಕ್ಷಣ ವ್ಯವಸ್ಥೆ ಕಲ್ಪಿಸುವಂತಹ ಯೋಜನೆಗಳು ಜಾರಿಯಾಗಬೇಕಿದೆ’ ಎಂದು ಒತ್ತಾಯಿಸಿದ್ದಾರೆ.
‘ವೇಮಗಲ್ –ಕುರುಗಲ್ ಪಟ್ಟಣ ಪಂಚಾಯಿತಿಯಲ್ಲಿ ಈ ಬಾರಿ ನಮ್ಮ ಪಕ್ಷ ಪ್ರಾಮಾಣಿಕ ಪ್ರಯತ್ನ ಮಾಡಿತು. ಜನರ ಬೆಂಬಲದ ನಿರೀಕ್ಷೆಯಲ್ಲಿ ನಮಗೂ ಮತಗಳು ಲಭಿಸಿವೆ. ಕಡಿಮೆ ಸಮಯದಲ್ಲಿ ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲವಿದು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಕಾರ್ಯ ಮುಂದುವರಿಸುತ್ತೇವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.