ADVERTISEMENT

ಭ್ರಷ್ಟಾಚಾರ ಮುಕ್ತ ದೇಶ ಎಎಪಿ ಮೂಲಮಂತ್ರ

​ಪ್ರಜಾವಾಣಿ ವಾರ್ತೆ
Published 28 ಮೇ 2022, 13:29 IST
Last Updated 28 ಮೇ 2022, 13:29 IST

ಕೋಲಾರ: ‘ಭ್ರಷ್ಟಾಚಾರ ಮುಕ್ತ ದೇಶ ನಿರ್ಮಾಣವು ಪಕ್ಷದ ಮೂಲಮಂತ್ರ. ಈ ನಿಟ್ಟಿನಲ್ಲಿ ಪಕ್ಷವು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ನೇತೃತ್ವದಲ್ಲಿ ರಾಜ್ಯದಲ್ಲೂ ಸಂಘಟನೆಗೆ ಒತ್ತು ನೀಡಿದೆ. ಪ್ರಜ್ಞಾವಂತರು, ನಿವೃತ್ತ ಸರ್ಕಾರಿ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ವೈದ್ಯರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ವಲಯ ಸಂಯೋಜಕ ರವಿಶಂಕರ್ ಹೇಳಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದ ಆಡಳಿತವು ದೇಶದಲ್ಲೇ ಮಾದರಿಯಾಗಿದೆ. ಪಕ್ಷ ಕರ್ನಾಟಕದಲ್ಲೂ ಅಧಿಕಾರಕ್ಕೆ ಬಂದರೆ ಜನರಿಗೆ ಮೂಲಸೌಕರ್ಯ ಕಲ್ಪಿಸುತ್ತೇವೆ. ಉಚಿತವಾಗಿ ವಿದ್ಯುತ್, ನೀರು ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್‌ರ ಕನಸು ನನಸು ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಕಾರಣಾಂತರದಿಂದ ರಾಜಕೀಯವಾಗಿ ದೂರವಾಗಿದ್ದೆ. ಪ್ರಾಮಾಣಿಕ ಪಕ್ಷಕ್ಕೆ ಸೇರಿ ಕೆಲಸ ಮಾಡುವ ಗುರಿಯೊಂದಿಗೆ ಎಎಪಿ ಸೇರಿದ್ದೇನೆ. ಪ್ರಸ್ತುತ ರಾಜಕೀಯ ಕಲುಷಿತಗೊಂಡಿದ್ದು, ಭ್ರಷ್ಟರು ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಅಧಿಕಾರ ಪಡೆದು ಲೂಟಿ ಮಾಡುತ್ತಿದ್ದಾರೆ’ ಎಂದು ಮಾಜಿ ಸಂಸದ ವೆಂಕಟೇಶ್‌ ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಸ್ವಚ್ಛ ರಾಜಕಾರಣಕ್ಕೆ, ಬದಲಾವಣೆಗೆ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ರಾಜ್ಯದ ಜನರು ಎಎಪಿ ಬೆಂಬಲಿಸಬೇಕು. ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ರಾಜ್ಯದಲ್ಲೂ ರಾಜಕೀಯವಾಗಿ ಬದಲಾವಣೆಯ ಗಾಳಿ ಬೀಸುವಂತೆ ಮಾಡುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಸಹೇರಾ ಭಾನು, ಮುಖಂಡರಾದ ಉದ್ಯಮಿ ಎಸ್.ಎನ್.ಆರ್.ಬಾಬು ರೆಡ್ಡಿ, ನಿವೃತ್ತ ಸರ್ಕಾರಿ ಅಧಿಕಾರಿಗಳಾದ ಎಸ್.ಮದಿವಣ್ಣನ್, ಟಿ.ಮುರಳಿರಾಜ್‌, ವೈ.ವಿ.ವೆಂಕಟಾಚಲ, ಎಂ.ಪ್ರತಾಪ್‌ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.