ADVERTISEMENT

ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ನಲ್ಲಿ ಹೆಚ್ಚಿದ ಅಪಘಾತ!

ಬೈಕ್, ಟ್ರ್ಯಾಕ್ಟರ್, ಆಟೊ ಪ್ರವೇಶವೇ ಅಪಘಾತಕ್ಕೆ ಕಾರಣ: ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 3:59 IST
Last Updated 10 ಜೂನ್ 2025, 3:59 IST
ಕೆಜಿಎಫ್‌ ಪೊಲೀಸ್‌ ಜಿಲ್ಲೆಯಲ್ಲಿ ಸ್ಪೀಡ್‌ ರಾಡಾರ್‌ ಗನ್‌ ಹಿಡಿದು ವೇಗದ ಮಾಪನ ಮಾಡುವ ಪೊಲೀಸ್‌ ಸಿಬ್ಬಂದಿ
ಕೆಜಿಎಫ್‌ ಪೊಲೀಸ್‌ ಜಿಲ್ಲೆಯಲ್ಲಿ ಸ್ಪೀಡ್‌ ರಾಡಾರ್‌ ಗನ್‌ ಹಿಡಿದು ವೇಗದ ಮಾಪನ ಮಾಡುವ ಪೊಲೀಸ್‌ ಸಿಬ್ಬಂದಿ   

ಕೆಜಿಎಫ್‌: ಬೆಂಗಳೂರಿನಿಂದ ಚೆನ್ನೈಗೆ ಎರಡೂವರೆ ಗಂಟೆಗಳಲ್ಲಿ ತಲುಪಬಹುದಾದ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ ರಸ್ತೆಯಲ್ಲಿ ವೇಗಕ್ಕೆ ಕಡಿವಾಣವೇ ಇಲ್ಲ. ಇದರಿಂದಾಗಿ ಈ ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಸೋಮವಾರವೂ ಟೋಲ್‌ನಿಂದ ವಾಪಸ್‌ ಬರುತ್ತಿದ್ದ ಕಾರು ರಸ್ತೆ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. 

ಬೆಂಗಳೂರು, ದಾಬಸ್‌ ಪೇಟೆ ಬಳಿಯ ಸೋಂಪುರ ಕೈಗಾರಿಕೆ ಪ್ರಾಂಗಣದಿಂದ ನೇರವಾಗಿ ಚೆನ್ನೈ ಬಂದರನ್ನು ಸುಲಭವಾಗಿ ಮತ್ತು ಸಂಚಾರ ದಟ್ಟಣೆ ಮುಕ್ತ ರಸ್ತೆಯನ್ನಾಗಿ ಮಾಡಿದ ಹೆಗ್ಗಳಿಕೆ ಈ ರಸ್ತೆಗಿದೆ. ಅಧಿಕೃತವಾಗಿ ಇನ್ನೂ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ, ಕೆಜಿಎಫ್‌ನಿಂದ ಬೆಂಗಳೂರಿನ ಹೊಸಕೋಟೆವರೆವಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಗರ ಮತ್ತು ಮಾಲೂರು ಬಳಿ ಇರುವ ಟೋಲ್‌ನಲ್ಲಿ ಶುಲ್ಕ ವಸೂಲಿ ಮಾಡುತ್ತಿಲ್ಲ. ಕೆಜಿಎಫ್‌ ನಗರದಿಂದ ಬೆಂಗಳೂರಿನ ಹೊಸಕೋಟೆಗೆ ಕೇವಲ ಮುಕ್ಕಾಲು ಗಂಟೆಯಲ್ಲಿ ಕ್ರಮಿಸಬಹುದಾದ ರಸ್ತೆಯಲ್ಲಿ ಒಂದರ ಹಿಂದೆ ಮತ್ತೊಂದು ಅಪಘಾತಗಳು ಸಂಭವಿಸುತ್ತಲೇ ಇವೆ.

ಮಾರ್ಚ್ 2ರ ಭಾನುವಾರ ಮಧ್ಯರಾತ್ರಿ ಬಂಗಾರಪೇಟೆ ಸಮೀಪ ಭೀಕರ ಅಪಘಾತವಾಗಿ ಕಮ್ಮಸಂದ್ರದ ಗರ್ಭಿಣಿ ಸೇರಿ ಐವರು ದಾರುಣವಾಗಿ ಮೃತಪಟ್ಟಿದ್ದರು. ನಂತರ ನಡೆದ ಮತ್ತೊಂದು ಕಾರು ಅಪಘಾತದಲ್ಲಿ ನಗರದ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ಅತಿವೇಗವಾಗಿ ಕಾರು ಚಾಲನೆ ಮಾಡಿದ ಆಂಧ್ರಪ್ರದೇಶದ ಯುವ ವೈದ್ಯ ಕೂಡ ಬಂಗಾರಪೇಟೆಯ ಸಿದ್ದನಹಳ್ಳಿ ಗ್ರಾಮದ ಸಮೀಪ ಅಪಘಾತ ಸಂಭವಿಸಿ ಮೃತಪಟ್ಟಿದ್ದರು. ಭಾನುವಾರ ರಾತ್ರಿ ಮಾಲೂರಿನ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು. ಇದರ ಜೊತೆಗೆ ಹಲವಾರು ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇವೆ.

ADVERTISEMENT

ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಹೀಗಾಗಿ, ಈಚೆಗೆ ಸಂಸದ ಮಲ್ಲೇಶಬಾಬು ಮತ್ತು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹೆದ್ದಾರಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹೆದ್ದಾರಿಯಲ್ಲಿ ಬೈಕ್‌, ಟ್ರ್ಯಾಕ್ಟರ್‌ ಮತ್ತು ಆಟೊಗಳಿಗೆ ಸಂಚಾರ ನಿಷೇಧವಿದೆ. ಕೆಜಿಎಫ್‌ ಟೋಲ್‌ ಬಳಿ ಬೆಮಲ್‌ ಪೊಲೀಸರು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಯಾವುದೇ ಬೈಕ್‌ ಹೆದ್ದಾರಿ ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ಆದರೆ ಮಾಲೂರು ಮತ್ತು ಹೊಸಕೋಟೆ ಮಧ್ಯೆ ಹೆದ್ದಾರಿ ಅಕ್ಕಪಕ್ಕ ತಡೆಗೋಡೆಗಳ ನಿರ್ಮಾಣಕ್ಕೆ ಅಡ್ಡಿಯನ್ನುಂಟು ಮಾಡಲಾಗುತ್ತಿದೆ. ಇದರಿಂದಾಗಿ ಬೈಕ್‌ಗಳು ಹೆದ್ದಾರಿ ಪ್ರವೇಶಿಸಿ,  ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಅತಿ ವೇಗವೇ ಅಪಘಾತಕ್ಕೆ ಕಾರಣ

ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಕೂಗು ಕೇಳಿಬಂದಿದೆ. ರಸ್ತೆ ಸಮತಟ್ಟಾಗಿದ್ದರೂ ಅಲ್ಲಲ್ಲಿ ವಾಹನಗಳು ಅಲುಗಾಡುತ್ತವೆ ಎಂದು ವಾಹನ ಚಾಲಕರು ದೂರುತ್ತಾರೆ. ಆದರೆ ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಯೋಜನೆಯ ಯೋಜನಾ ನಿರ್ದೇಶಕಿ ಅರ್ಚನಾ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ. ನೂರು ಕಿ.ಮೀ ವೇಗವಾಗಿ ಸಂಚರಿಸಲು ಸಾಧ್ಯವಾಗದ ಸಣ್ಣಪುಟ್ಟ ಕಾರುಗಳು ಕೂಡ ಅತಿವೇಗವಾಗಿ ಸಂಚರಿಸುತ್ತಿವೆ. ರಸ್ತೆಯ ವೇಗ ಕೇವಲ 120 ಕಿ.ಮೀ  ಆಗಿದ್ದರೂ ಮಿತಿ ಮೀರಿದ ವೇಗ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವೇಗ ಕಡಿವಾಣಕ್ಕೆ ಸ್ಪೀಡ್ ರಾಡರ್ ಗನ್ ರಸ್ತೆಯಲ್ಲಿ 120 ಕಿ.ಮೀ ವೇಗಕ್ಕೆ ಅವಕಾಶವಿದೆ. ಬಂಗಾರಪೇಟೆ ಬೆಮಲ್‌ ಮತ್ತು ಬೇತಮಂಗಲ ಪೊಲೀಸ್‌ ಠಾಣೆಗೆ ಸ್ಪೀಡ್‌ ರಾಡಾರ್‌ ಗನ್‌ ವಿತರಣೆ ಮಾಡಲಾಗಿದೆ. ವೇಗ ಮೀರಿದ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಶುರುವಾಗಿದೆ. ಟೋಲ್‌ ಬಳಿ ನಡೆದ ಅಪಘಾತದ ಸ್ಥಳದಲ್ಲಿ ಜಿಕ್‌ ಜಾಕ್‌ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಕೆ.ಎಂ.ಶಾಂತರಾಜು ಎಸ್‌ಪಿ

ಎಕ್ಸ್‌ಪ್ರೆಸ್‌ ಕಾರಿಡಾರ್‌ನಲ್ಲಿ ವೇಗಕ್ಕೆ ಕಡಿವಾಣ ಹಾಕಲು ನಮಗೆ ಅಧಿಕಾರ ಇಲ್ಲ. ಪೊಲೀಸರು ವೇಗ ಮಾಪಕದಿಂದ ಅಳೆದು ದಂಡ ವಿಧಿಸಬಹುದು.
– ಅರ್ಚನಾ, ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಯೋಜನೆಯ ಯೋಜನಾ ನಿರ್ದೇಶಕಿ 
ರಸ್ತೆಯಲ್ಲಿ ವೇಗ ನಿಯಂತ್ರಣಕ್ಕೆ ಮನವಿ ಮಾಡುತ್ತಿದ್ದರೂ ಚಾಲಕರು ಅತಿವೇಗವಾಗಿ ವಾಹನ ಚಲಾಯಿಸಿ ಅಪಘಾತಕ್ಕೆ ತಾವೇ ಕಾರಣರಾಗುತ್ತಿದ್ದಾರೆ
– ಮಲ್ಲೇಶಬಾಬು, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.