ADVERTISEMENT

ಆರೋಪಿಗಳು ಪರಾರಿ: ಗುಂಡು ಹಾರಿಸಿದ ಎಸ್‌ಐ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 16:09 IST
Last Updated 31 ಜುಲೈ 2020, 16:09 IST

ಕೋಲಾರ: ಪರಾರಿಯಾಗಲೆತ್ನಿಸಿದ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕಾಗಿ ಬೆಂಗಳೂರಿನ ನಂದಿನಿ ಲೇಔಟ್‌ ಠಾಣೆ ಎಸ್‌ಐ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಗರದ ಜಿಲ್ಲಾ ಪಂಚಾಯಿತಿ ರಸ್ತೆಯ ಅರಹಳ್ಳಿಗ ಗೇಟ್‌ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ನಂದಿನಿ ಲೇಔಟ್‌ ಠಾಣೆ ಎಸ್‌ಐ ನವೀದ್‌ ಅವರು ಸಿಬ್ಬಂದಿಯೊಂದಿಗೆ ಕೊಲೆ ಹಾಗೂ ದರೋಡೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೆನ್ನಟ್ಟಿ ಬೆಂಗಳೂರಿನಿಂದ ಖಾಸಗಿ ಕಾರಿನಲ್ಲಿ ನಗರಕ್ಕೆ ಬಂದಿದ್ದರು. ಮತ್ತೊಂದು ಕಾರಿನಲ್ಲಿ ಬಂದಿದ್ದ ಆರೋಪಿಗಳು ಅರಹಳ್ಳಿ ಗೇಟ್‌ ಬಳಿ ವಾಹನ ನಿಲ್ಲಿಸಿ ಕೆಳಗಿಳಿದಿದ್ದಾರೆ.

ಆಗ ನವೀದ್‌ ಮತ್ತು ಸಿಬ್ಬಂದಿಯು ಅವರನ್ನು ಬಂಧಿಸಲು ಮುಂದಾದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಂತದಲ್ಲಿ ನವೀದ್‌ ತಮ್ಮ ಸರ್ವಿಸ್‌ ರಿವಾಲ್ವಾರ್‌ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ನಂತರ ಆರೋಪಿಗಳು ಪೊಲೀಸರ ಕಾರಿನ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ನವೀದ್‌ ಮತ್ತು ಅವರ ಜತೆಗಿದ್ದ ಪೊಲೀಸ್‌ ಸಿಬ್ಬಂದಿಯು ಸಮವಸ್ತ್ರ ಧರಿಸದೆ ಮಫ್ತಿಯಲ್ಲಿದ್ದರು. ಹೀಗಾಗಿ ಸ್ಥಳೀಯರು ಅವರನ್ನು ದುಷ್ಕರ್ಮಿಗಳೆಂದು ಭಾವಿಸಿ ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಲೆತ್ನಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಲ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.