ADVERTISEMENT

ಗರ್ಭಿಣಿಗೆ ದೊರೆಯದ ಚಿಕಿತ್ಸೆ: ತಪ್ಪು ಕಂಡುಬಂದರೆ ವೈದ್ಯರ ವಿರುದ್ಧ ಕ್ರಮ–ಡಿಎಚ್‌ಒ

​ಪ್ರಜಾವಾಣಿ ವಾರ್ತೆ
Published 28 ಮೇ 2019, 12:30 IST
Last Updated 28 ಮೇ 2019, 12:30 IST

ಕೋಲಾರ: ‘ಜಿಲ್ಲೆಯ ಕೆಜಿಎಫ್‌ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಗೆ ಸಮರ್ಪಕವಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷತೆ ತೋರಿರುವ ವೈದ್ಯರ ವಿರುದ್ಧ ತನಿಖೆ ನಡೆಸಿ ತಪ್ಪು ಕಂಡು ಬಂದರೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗರ್ಭಿಣಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಸೋಮವಾರ ಮಧ್ಯಾಹ್ನ 2.45ಕ್ಕೆ ಬಂದು ಆಸ್ಪತ್ರೆ ಮುಂಭಾಗ ಕುಳಿತಿದ್ದಾಳೆ. ಅಲ್ಲಿನ ವೈದ್ಯಾಧಿಕಾರಿ ಡಾ.ಶಿವಕುಮಾರ್ ಕಾರ್ಯ ನಿಮಿತ್ತ ಹೊರಗೆ ಹೋಗಿದ್ದು ಆಸ್ಪತ್ರೆಗೆ ಸಂಜೆ 5 ಗಂಟೆಗೆ ಬಂದು ಮಹಿಳೆಯನ್ನು ತಪಾಸಣೆ ಮಾಡಿ ಸ್ಕ್ಯಾನ್ ಮಾಡಿಸಿಕೊಂಡು ಬರಲು ತಿಳಿಸಿದ್ದಾರೆ’ ಎಂದರು.

‘ಸ್ಕ್ಯಾನ್ ವರದಿಯಲ್ಲಿ ಮಗುವಿನ ಚಲನವಲನಗಳು ಇರಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಿ ಕಳುಹಿಸಿಕೊಟ್ಟಿದ್ದಾರೆ. ಇಲ್ಲಿಗೆ ಬರುವಷ್ಟರಲ್ಲಿ ಮಗು ಪ್ರಾಣ ಹೋಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ನಗರದ ಜಿಲ್ಲಾ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ಹಿಮೋಗ್ಲೋಬಿನ್ ಮತ್ತು ಪ್ಲೇಟ್‌ಲೆಟ್ ಅಂಶಗಳು ಕಡಿಮೆ ಕಂಡುಬಂದಿದೆ. ಇದ್ದು ಶಸ್ತ್ರ ಚಿಕಿತ್ಸೆ ನಡೆಸಲು ರಕ್ತದ ಕೊರತೆ ಇದುದ್ದರಿಂದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ಮಾಡಿದಾಗ ಗರ್ಭದಲ್ಲೇ ಮಗು ಮೃತ ಪಟ್ಟಿತ್ತು. ಶಸ್ತ್ರ ಚಿಕಿತ್ಸೆ ನಡೆಸಿ ಮೃತ ಪಟ್ಟಿರುವ ಮಗುವನ್ನು ಹೊರತೆಗೆದು ತಾಯಿಯನ್ನು ರಕ್ಷಿಸಲಾಗಿದೆ. ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸದಿದ್ದರೆ ತಾಯಿಯ ಜೀವಕ್ಕೂ ಅಪಾಯವಿತ್ತು. ಈಗಾಲು ತಾಯಿಯ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.