ADVERTISEMENT

ಕೋಲಾರ: ಆದಿಮದಲ್ಲಿ ನೆಲಪಠ್ಯಗಳ ರಚನಾ ಕಮ್ಮಟ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:54 IST
Last Updated 14 ಡಿಸೆಂಬರ್ 2025, 6:54 IST
ಕೋಲಾರದ ಆದಿಮ ರಂಗಭೂಮಿ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ತಮಟೆ ವಾದನ ಪ್ರದರ್ಶಿಸಿದರು
ಕೋಲಾರದ ಆದಿಮ ರಂಗಭೂಮಿ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ತಮಟೆ ವಾದನ ಪ್ರದರ್ಶಿಸಿದರು   

ಕೋಲಾರ: ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಮೂರು ದಿನಗಳ ನೆಲಪಠ್ಯಗಳ ರಚನಾ ಕಮ್ಮಟ ಆರಂಭವಾಗಿದೆ.

ಡಿ.14 ರವರೆಗೆ ನಡೆಯಲಿದ್ದು, ಕಮ್ಮಟದಲ್ಲಿ ಸ್ಥಳೀಯ ಹಾಗೂ ನಾಡಿನ ವಿವಿಧ ಭಾಗಗಳ ಸಂಸ್ಕೃತಿ ಚಿಂತಕರು, ರಂಗನಿರ್ದೇಶಕರು, ಸಾಹಿತಿಗಳು, ಕಲಾವಿದರು ಭಾಗವಹಿಸಿ ಚರ್ಚೆ, ಸಲಹೆ ನೀಡುತ್ತಿದ್ದಾರೆ.

ಕಮ್ಮಟಕ್ಕೆ ಆದಿಮ ರಂಗಭೂಮಿ ಶಿಕ್ಷಣ ಕೇಂದ್ರದ ಆಡಳಿತ ಮಂಡಳಿ ಅಧ್ಯಕ್ಷೆ ಡಾ.ಆರ್.ಕೆ.ಸರೋಜಾ ಉದ್ಘಾಟಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅರ್ಬಾಜ್ ಪಾಷ, ಆದಿಮ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ ಭಾಗವಹಿಸಿದ್ದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ.ಮುನಿರತ್ನಪ್ಪ, ನೆಲಪಠ್ಯಗಳು ಅಂದರೆ ಏನು? ಅವು ಹೇಗಿರಬೇಕು? ಅವುಗಳನ್ನು ರಚಿಸುವಾಗ ಯಾವ ರೀತಿಯ ಎಚ್ಚರಿಕೆ ಮತ್ತು ಜವಾಬ್ದಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು? ಎದುರಾಗುವ ಪ್ರಶ್ನೆಗಳು, ಅವುಗಳಿಗೆ ತಕ್ಕ ಉತ್ತರಗಳನ್ನು ಹೇಗೆ ಕಂಡುಕೊಳ್ಳಬೇಕು ಎನ್ನುವ ಸಾಧ್ಯತೆಗಳನ್ನು ತಿಳಿಸಿದರು.

ಡಾ.ಆರ್.ಕೆ.ಸರೋಜಾ ಮಾತನಾಡಿ, ಸಾಮಾಜಿಕ ಬದ್ಧತೆಯುಳ್ಳ ಸಮಾನ ಮನಸ್ಕರು, ಹೋರಾಟಗಾರರು, ಚಿಂತಕರು 20 ವರ್ಷಗಳಿಂದ ಆದಿಮ ಕಟ್ಟಿ ನಡೆಸಿಕೊಂಡು ಬಂದಿದ್ದಾರೆ. ಆದಿಮ ಒಂದು ಶಕ್ತಿಯ ಸಲೆ, ಅಯಸ್ಕಾಂತವಿದ್ದಂತೆ. ಇಲ್ಲಿಗೆ ಯಾರೂ ಬಂದರೂ ಚುಂಬಕ ಶಕ್ತಿಯಿಂದ ತನ್ನತ್ತ ಸಳೆದುಕೊಂಡುಬಿಡುತ್ತದೆ ಎಂದರು.

ಆದಿಮ ಅಧ್ಯಕ್ಷ ಮುನಿಸ್ವಾಮಿ ಮಾತನಾಡಿ, ‘ಸಾಮಾಜಿಕ ಬದ್ಧತೆಯುಳ್ಳ ಅನೇಕ ಪ್ರತಿಭಾವಂತ ಸಾಹಿತಿಗಳು, ಕವಿಗಳು, ಚಿಂತಕರು ಆದಿಮ ಆರಂಭಿಸಿದರು. ಪ್ರಾರಂಭದಲ್ಲಿ ಜೊತೆಗಿದ್ದ ಕೆಲವರು ನಾನಾ ಕಾರಣಗಳಿಂದ ಹೊರ ಹೋದರು. ಆದರೂ ಆದಿಮದ ದೊಡ್ಡ ಬಳಗ ಕರ್ನಾಟಕ ಅಲ್ಲದೇ ಬೇರೆ ಬೇರೆ ಪ್ರದೇಶದ ಸಂಪನ್ಮೂಲ ವ್ಯಕ್ತಿಗಳು, ಅನೇಕ ಕಾಣದ ಕೈಗಳು ಆದಿಮವನ್ನು ಮುನ್ನೆಡೆಸುವಲ್ಲಿ ಸಹಕಾರ ನೀಡುತ್ತಿದ್ದಾರೆ. ಇಲ್ಲಿ ಯಾರೂ ಶಾಶ್ವತವಾಗಿ ಇರುವವರಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ಆದಿಮ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ನೆಲಪಠ್ಯಗಳ ರಚನೆಗೆ ಸಂಬಂಧಿಸಿ ರಾಜಪ್ಪ ದಳವಾಯಿ. ‌ಜನ್ನಿ (ಜನಾರ್ದನ್), ಗೊಲ್ಲಹಳ್ಳಿ ಶಿವಪ್ರಸಾದ್, ಉದಯ್ ಸೋಸಲೆ, ನಾವೆಂಕಿ, ಮಲ್ಲೇಶ್. ಅಶೋಕ್ ತೋಟ್ನಹಳ್ಳಿ, ಕೆ.ವಿ.ನೇತ್ರಾವತಿ, ಸಂಸ್ಕೃತಿ ಚಿಂತಕರು, ರಂಗ ನಿರ್ದೇಶಕರು, ಸಾಹಿತಿಗಳು. ಕಲಾವಿದರು ಮೂರು ದಿನ ನೆಲಪಠ್ಯಗಳ ರಚನೆಯ ರೀತಿನೀತಿಗಳನ್ನು ಕಂಡುಕೊಳ್ಳಲಿದ್ದಾರೆ.

ಸಿಂಡಿಕೇಟ್ ಸದಸ್ಯ ಅರ್ಬಾಜ್ ಪಾಷ ಮಾತನಾಡಿದರು. ಆದಿಮ ರಂಗಭೂಮಿ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಆದಿಮ ಆಶಯ ಗೀತೆ ಹಾಗೂ ತಮಟೆ ವಾದನ ಪ್ರದರ್ಶನ ನೀಡಿದರು. ಕೆ.ವಿ.ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಆಡಳಿತಾಧಿಕಾರಿ ಅಗ್ರಹಾರ ರಮೇಶ್ ಸ್ವಾಗತಿಸಿದರು. ಹ.ಮಾ.ರಾಮಚಂದ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.