ADVERTISEMENT

ಕೋಲಾರ: ಗೃಹ ನಿರ್ಮಾಣ ಸಂಘ ರಚನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 16:38 IST
Last Updated 9 ನವೆಂಬರ್ 2020, 16:38 IST
ಇತ್ತೀಚೆಗೆ ನಿಧನರಾದ ಡಿಸಿಸಿ ಬ್ಯಾಂಕ್ ನೌಕರ ಎಳಚಪ್ಪ ಅವರ ಪತ್ನಿ ರಾಧಮ್ಮ ಅವರನ್ನು ಕೋಲಾರದಲ್ಲಿ ಸೋಮವಾರ ಸನ್ಮಾನಿಸಿ ಆರ್ಥಿಕ ನೆರವು ನೀಡಲಾಯಿತು.
ಇತ್ತೀಚೆಗೆ ನಿಧನರಾದ ಡಿಸಿಸಿ ಬ್ಯಾಂಕ್ ನೌಕರ ಎಳಚಪ್ಪ ಅವರ ಪತ್ನಿ ರಾಧಮ್ಮ ಅವರನ್ನು ಕೋಲಾರದಲ್ಲಿ ಸೋಮವಾರ ಸನ್ಮಾನಿಸಿ ಆರ್ಥಿಕ ನೆರವು ನೀಡಲಾಯಿತು.   

ಕೋಲಾರ: ‘ಬ್ಯಾಂಕ್ ನೌಕರರು ಗೃಹ ನಿರ್ಮಾಣ ಸಹಕಾರ ಸಂಘ ರಚಿಸಿಕೊಂಡು ಲೇಔಟ್ ನಿರ್ಮಿಸಿಕೊಳ್ಳಲು ಪ್ರಯತ್ನಿಸಿದರೆ ಸಹಕಾರ ನೀಡುತ್ತೇವೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಇತ್ತೀಚೆಗೆ ನಿಧನರಾದ ಡಿಸಿಸಿ ಬ್ಯಾಂಕ್‌ ನೌಕರ ಎಳಚಪ್ಪ ಅವರ ಪತ್ನಿ ರಾಧಮ್ಮ ಅವರಿಗೆ ಇಲ್ಲಿ ಸೋಮವಾರ ಆರ್ಥಿಕ ನೆರವು ನೀಡಿ ಮಾತನಾಡಿ, ‘ಸಿಬ್ಬಂದಿಯು ಬ್ಯಾಂಕ್ ಉಳಿಸುವ ಸಂಕಲ್ಪದೊಂದಿಗೆ ಕೆಲಸ ಮಾಡಿ. ಬ್ಯಾಂಕ್‌ನ ಲಾಭಾಂಶದಲ್ಲಿ ಸ್ವಲ್ಪ ಹಣವನ್ನು ಕಾನೂನಿನ ಅನ್ವಯ ಅವಕಾಶವಿದ್ದರೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಸಿಬ್ಬಂದಿಯು ಅನ್ನ ನೀಡುವ ಬ್ಯಾಂಕ್ ಉಳಿಸಬೇಕು. ಡಿಸಿಸಿ ಬ್ಯಾಂಕನ್ನು ದೇಶದಲ್ಲೇ ನಂಬರ್‌ 1 ಮಾಡುವ ಗುರಿಯಿಟ್ಟುಕೊಳ್ಳಿ. ಈ ಹಿಂದೆ ಬ್ಯಾಂಕ್ ದಿವಾಳಿಯಾಗಿತ್ತು. ಬ್ಯಾಂಕ್‌ನ ವಸೂಲಾಗದ ಸಾಲವನ್ನು (ಎನ್‌ಪಿಎ) ಶೇ 2.5ಕ್ಕ ಇಳಿಸಿ ಲಾಭದತ್ತ ಕೊಂಡೊಯ್ಯಲು ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿ ಶ್ರಮವೂ ಇದೆ. ಆದರೆ, ಕೆಲ ನೌಕರರಲ್ಲಿ ಕರ್ತವ್ಯ ಶ್ರದ್ಧೆಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಸಿಬ್ಬಂದಿ ಕೇಳಿದ್ದನ್ನು ನೀಡಿದ್ದೇವೆ. ವೇತನ ಹೆಚ್ಚಳ, ಬೋನಸ್, ವೈದ್ಯಕೀಯ ವಿಮೆ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದೇವೆ. ಬ್ಯಾಂಕ್‌ನ ನೌಕರರ ಸಹಕಾರ ಸಂಘಕ್ಕೆ ನೀಡುವ ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡುವಂತೆ ಕೋರಿದ್ದೀರಿ. ಈ ಸಂಬಂಧ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

ನೆರವು ಹೆಚ್ಚಳ: ‘ಬ್ಯಾಂಕ್‌ನಿಂದ ಹಿಂದೆ ಸಹಕಾರ ಸಂಘಕ್ಕೆ ಸಾಲ ವಿತರಣೆಗಾಗಿ ₹ 25 ಲಕ್ಷ ಆರ್ಥಿಕ ನೆರವು ನೀಡಲಾಗಿತ್ತು. ಹೊಸ ಆಡಳಿತ ಮಂಡಳಿಯು ಈ ಮೊತ್ತವನ್ನು ₹ 1 ಕೋಟಿಗೆ ಹೆಚ್ಚಿಸಿ ಮಂಜೂರು ಮಾಡಿದೆ. ಈ ವರ್ಷ ಅದು ₹ 2 ಕೋಟಿಯಾಗಿದೆ’ ಎಂದು ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಹುಸೇನ್ ದೊಡ್ಡಮನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಬೈರೇಗೌಡ, ಶಿವಕುಮಾರ್, ನಾಗೇಶ್, ಚೌಡಪ್ಪ, ಸಂಘದ ಕಾರ್ಯದರ್ಶಿ ಖಲೀಮ್‌ ಉಲ್ಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.