ADVERTISEMENT

ಕೋವಿಡ್ ನಿಯಮ ಪಾಲಿಸಲು ಹಾಲು ಉತ್ಪಾದಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:33 IST
Last Updated 15 ಜನವರಿ 2022, 8:33 IST
ಶ್ರೀನಿವಾಸಪುರದಲ್ಲಿ ಹಾಲು ಉತ್ಪಾದಕರಿಗೆ ಕೋಚಿಮುಲ್ ನಿರ್ದೇಶಕ ಎನ್. ಹನುಮೇಶ್ ರಾಸು ವಿಮಾ ಚೆಕ್ ವಿತರಿಸಿದರು. ಉಪ ವ್ಯವಸ್ಥಾಪಕ ಕೆ.ಎಸ್. ನರಸಿಂಹಯ್ಯ ಹಾಜರಿದ್ದರು
ಶ್ರೀನಿವಾಸಪುರದಲ್ಲಿ ಹಾಲು ಉತ್ಪಾದಕರಿಗೆ ಕೋಚಿಮುಲ್ ನಿರ್ದೇಶಕ ಎನ್. ಹನುಮೇಶ್ ರಾಸು ವಿಮಾ ಚೆಕ್ ವಿತರಿಸಿದರು. ಉಪ ವ್ಯವಸ್ಥಾಪಕ ಕೆ.ಎಸ್. ನರಸಿಂಹಯ್ಯ ಹಾಜರಿದ್ದರು   

ಶ್ರೀನಿವಾಸಪುರ: ಹಾಲು ಉತ್ಪಾದಕರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು. ಸಂಘಕ್ಕೆ ಹಾಲು ಹಾಕಲು ಹೋಗುವಾಗ ಮಾಸ್ಕ್ ಧರಿಸಿರಬೇಕು. ಪರಸ್ಪರ ಅಂತರ ಪಾಲನೆ ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್. ಹನುಮೇಶ್ ತಿಳಿಸಿದರು.

ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಹಾಲು ಉತ್ಪಾದಕರಿಗೆ ಮೃತಪಟ್ಟ ರಾಸುಗಳ ವಿಮಾ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.

12 ಫಲಾನುಭವಿಗಳಿಗೆ ₹ 6.50 ಲಕ್ಷ ಮೌಲ್ಯದ ಚೆಕ್ ವಿತರಿಸಲಾಗಿದೆ. ವಿಮಾ ಪರಿಹಾರ ಪಡೆದ ರೈತರು ಮತ್ತೆ ಕಡ್ಡಾಯವಾಗಿ ಹಸು ಖರೀದಿಸಿ ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬೇಕು. ಉತ್ಪಾದಿಸಿದ ಹಾಲನ್ನು ಕೋಚಿಮುಲ್ ವ್ಯಾಪ್ತಿಯ ಡೇರಿಗೆ ಹಾಕುವುದರ ಮೂಲಕ ವಿವಿಧ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್. ನರಸಿಂಹಯ್ಯ ಮಾತನಾಡಿ, ಹಾಲಿನ ಗುಣಮಟ್ಟ ಹೆಚ್ಚಿಸಲು ಹಸಿರು ಮತ್ತು ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋಧಾರ ಶಕ್ತಿ ಮತ್ತು ಟ್ರಿಯೋ ಎನ್ಬಿ ಸ್ಯಾಕ್ ಪುಡಿ ನೀಡಬೇಕು. ಕೆಚ್ಚಲು ಬಾವು ಹಾಗೂ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು
ಹೇಳಿದರು.

ಉಪ ಕಚೇರಿ ವಿಸ್ತರಣಾಧಿಕಾರಿಗಳಾದ ಎಂ.ಜಿ. ಶ್ರೀನಿವಾಸ್, ಎನ್. ಶಂಕರ್, ಪಿ.ಕೆ. ನರಸಿಂಹರಾಜು, ಎಸ್. ವಿನಾಯಕ, ಕೆ.ಪಿ. ಶ್ವೇತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.