ADVERTISEMENT

ಬಯಲು ಸೀಮೆ ರೈತರಿಗೆ ಕೃಷಿ ಹೊಂಡ ವರದಾನ

ಬಂಗಾರಪೇಟೆ: ಮಳೆಗೆ ತುಂಬಿದ ಕೃಷಿ ಹೊಂಡಗಳು– ರೈತರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 25 ಮೇ 2025, 4:03 IST
Last Updated 25 ಮೇ 2025, 4:03 IST
ಬಂಗಾರಪೇಟೆ ತಾಲ್ಲೂಕಿನ ಚಿಕ್ಕ ಕಳವಂಚಿ ಗ್ರಾಮದ ರೈತರೊಬ್ಬರ ಜಮೀನಿನ ಕೃಷಿ ಹೊಂಡದಲ್ಲಿ ಸಂಗ್ರಹವಾಗಿರುವ ಮಳೆ ನೀರು
ಬಂಗಾರಪೇಟೆ ತಾಲ್ಲೂಕಿನ ಚಿಕ್ಕ ಕಳವಂಚಿ ಗ್ರಾಮದ ರೈತರೊಬ್ಬರ ಜಮೀನಿನ ಕೃಷಿ ಹೊಂಡದಲ್ಲಿ ಸಂಗ್ರಹವಾಗಿರುವ ಮಳೆ ನೀರು   

ಬಂಗಾರಪೇಟೆ: ಬರದ ನಾಡಿನಲ್ಲಿ ಅಂತರ್ಜಾಲ ಸಂರಕ್ಷಣೆ ಹಾಗೂ ಮಳೆ ನಂಬಿ ಕೃಷಿ ಮಾಡುವ ಬಯಲು ಸೀಮೆಯ ರೈತರಿಗೆ ಕೃಷಿ ಹೊಂಡಗಳು ವರದಾನವಾಗಿವೆ.

ತಾಲ್ಲೂಕಿನಲ್ಲಿ 2024-25ನೇ ಸಾಲಿನಲ್ಲಿ ಒಟ್ಟು 120 ಕೃಷಿ ಹೊಂಡಗಳನ್ನು ಕೃಷಿ ಇಲಾಖೆಯಿಂದ ನಿರ್ಮಿಸಲಾಗಿದೆ.

ನರೇಗಾ ಯೋಜನೆ ಮತ್ತು ಕೃಷಿ ಭಾಗ್ಯ ಯೋಜನೆಯಡಿಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯ ಧನ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ರೈತರ ತಮ್ಮ ಹೊಲಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ಉತ್ತಮ ಬೆಳೆ ಬೆಳೆಯುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ಇತೀಚೆಗೆ ಸುರಿದ ಮಳೆಯಿಂದ ತಾಲ್ಲೂಕಿನಾದ್ಯಂತ ರೈತರು ನಿರ್ಮಾಣ ಮಾಡಿರುವ ಕೃಷಿಹೊಂಡಗಳಲ್ಲಿ ಮಳೆ ನೀರು ಸಂಗ್ರಹವಾಗಿರುವುದು ರೈತರಲ್ಲಿ ಸಂಸತವನ್ನು ಮೂಡಿಸಿದೆ.

ಮಳೆಗಾಲದಲ್ಲಿ ಹೊಂಡಗಳಲ್ಲಿ ಸಂಗ್ರಹವಾದ ನೀರು ಬೇಸಿಗೆ ಅಥವಾ ಮಳೆ ಬಾರದ ಸಮಯದಲ್ಲಿ ಬೆಳೆ ಒಣಗದಂತೆ ಜೀವನಾಡಿಯಾಗಿದೆ. ಅಲ್ಲದೆ ಅಂತರ್ಜಲ ಮಟ್ಟವೂ ವೃದ್ಧಿಸುತ್ತಿದೆ.

ಕೃಷಿ, ತೋಟಗಾರಿಕೆ , ರೇಷ್ಮೆ ಇಲಾಖೆಗಳಿಂದ ಬದು ನಿರ್ಮಾಣ ಮತ್ತು ಕೃಷಿ ಹೊಂಡಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 21 ಮೀಟರ್ ಅಗಲ, 21 ಮೀಟರ್ ಉದ್ದ ಮತ್ತು 3 ಮೀಟರ್ ಎತ್ತರಕ್ಕೆ ಕೃಷಿ ಹೊಂಡಗಳನ್ನು ಕೃಷಿಕರು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ಜಮೀನು ಕಡಿಮೆ ಇರುವ ರೈತರು 18X18X3 ಮತ್ತು 15X15X3 ಅಳತೆಯ ಕೃಷಿ ಹೊಂಡಗಳನ್ನೂ ನಿರ್ಮಿಸಿಕೊಂಡಿದ್ದಾರೆ.

ರೈತರು ಶೇ 20 ರಷ್ಟು ವಂತಿಗೆ ಹಾಕಿದರೆ ಉಳಿದ ಖರ್ಚನ್ನು ಭರಿಸುತ್ತಿದೆ. ಸಾಮಾನ್ಯ ರೈತರಿಗೆ ಶೇ 80, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 90 ರಷ್ಟು ಸಹಾಯ ಧನ ನೀಡುತ್ತಿದೆ.

ಮುನ್ನಚ್ಚರಿಕೆ ಕ್ರಮಕ್ಕೆ ಸೂಚನೆ

ಕೇವಲ ಕೃಷಿ ಹೊಂಡಗಳನ್ನು ನಿರ್ಮಿಸಿ ಹಾಗೆಯೇ ಬಿಟ್ಟರೆ ಅಪಾಯ. ಹೀಗಾಗಿ ಅವುಗಳ ಸುತ್ತಲೂ ತಂತಿ ಬೇಲಿ ಅಳವಡಿಸಬೇಕು ಹಾಗೂ ಮುನ್ನಚ್ಚೆರಿಕೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಸೂಚಿಸಿದೆ. ಅಲ್ಲದೆ ಇದಕ್ಕಾಗಿ ಸಹಾಯಧನವನ್ನೂ ನೀಡುತ್ತಿದೆ.

ಸಾಮಾನ್ಯ ವರ್ಗದ ರೈತರಿಗೆ ತಂತಿಬೇಲಿ ಅಳವಡಿಸಲು ₹14800 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ₹18500 ಸಹಾಯ ಧನ ನೀಡಲಾಗುತ್ತಿದೆ. ಇದರೊಂದಿಗೆ ಟಾರ್ಪಲ್ ಡಿಸೈಲ್ ಪಂಪ್‍ಸೆಟ್ ಮತ್ತು ಸ್ಪಿಂಕ್ಲರ್‌ ಸೆಟ್ ಅಳವಡಿಸಿಕೊಳ್ಳಲೂ ಅನುದಾನ ನೀಡಲಾಗುತ್ತಿದೆ. ಒಟ್ಟಾರೆ ಮಳೆ ನೀರಿನ ಸದ್ಬಳಕೆಯಾಗಬೇಕೆಂಬ ಉದ್ದೇಶದಿಂದ ಸರ್ಕಾರ ಇಷ್ಟೆಲ್ಲ ಕಾರ್ಯಕ್ರಮ ಮತ್ತು ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಜ್ಯೋತಿ ತಿಳಿಸಿದರು.

ಅನಾಹುತ ತಪ್ಪಿಸಿ ಮಳೆ ನೀರು ಸಂಗ್ರಹಿಸಿ ಮಳೆ ಇಲ್ಲದಾಗ ಮಳೆ ನೀರು ಉಪಯೋಗಿಸಲು ಕೃಷಿ ಹೊಂಡಗಳು ರೈತರಿಗೆ ವರದಾನವಾಗಿದೆ. ಆದರೆ ಸರ್ಕಾರದ ಸಹಾಯ ಧನವನ್ನು ಬಳಸಿಕೊಂಡು ರೈತರ ಮತ್ತು ರೈತರ ಮಕ್ಕಳ ಹಿತದೃಷ್ಟಿಯಿಂದ ಕೃಷಿ ಹೊಂಡಗಳಿಗೆ ತಂತಿ ಬೇಲಿ ಹಾಕಿ ಸಂಭವಿಸುವಂತಹ ಅನಾಹುತ ತಪ್ಪಿಸಬೇಕು. ಪ್ರತಿಭಾ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ

ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ರೈತರು ಮುಂದೆ ಬರಬೇಕು. ಮಳೆ ಕೈ ಕೊಟ್ಟಾಗ ಹೊಂಡದ ನೀರಿನಿಂದ ಬೆಳೆ ಉಳಿಸಿಕೊಳ್ಳಬಹುದು. ಅಲ್ಲದೆ ಬರಡು ಭೂಮಿಯಲ್ಲಿ ಕೃಷಿ ಹೊಂಡದಿಂದ ಉತ್ತಮ ಬೆಳೆ ಬೆಳೆಯುವುದ ಜೊತೆಗೆ ಅಂತರ್ಜಲವು ವೃದ್ಧಿಸುತ್ತದೆ.
ವಿಜಯ್ ಕುಮಾರ್, ಸಹಾಯಕ ಕೃಷಿ ಅಧಿಕಾರಿ
ಕೃಷಿ ಹೊಂಡಗಳಲ್ಲಿನ ಸಂಗ್ರಹಿಸಿದ ಮಳೆ ನೀರಿನಿಂದ ಬೇಸಿಗೆಯಲ್ಲಿ ಉಪಯೋಗಿಸಿಕೊಂಡು ಹೈನುಗಾರಿಕೆ ಮಾಡುತ್ತಿದ್ದೇನೆ. ಆದಾಯ ಗಳಿಸಲು ಸಹಕಾರಿಯಾಗಿದೆ.
ನಂದೀಶ್, ಪ್ರಗತಿಪರ ರೈತ ದೆಬ್ಬನಹಳ್ಳಿ
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಕುಸಿಯುತ್ತಿರುವ ಕಾರಣ ಕೃಷಿ ಹೊಂಡ ಮತ್ತು ಬದುಗಳ ನಿರ್ಮಾಣದಿಂದ ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸಿದರೆ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಿದೆ.
ಕೆ ಚಂದ್ರಯ್ಯ, ಅಂತರ್ಜಲ ಸಂರಕ್ಷಣೆ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.