ಕೆಜಿಎಫ್ ತಾಲ್ಲೂಕು ಮಾರಿಕುಪ್ಪಂ ಗ್ರಾಮ ಪಂಚಾಯಿತಿಗೆ ಸೇರಿದ ಚಲ್ದಿಗಾನಹಳ್ಳಿಯಲ್ಲಿನ ಅಂಬೇಡ್ಕರ್ ಭವನದ ಸ್ಥಿತಿ.
ಕೆಜಿಎಫ್: ಅಸ್ವಿತ್ವದಲ್ಲಿಯೇ ಇಲ್ಲದ ಅಂಬೇಡ್ಕರ್ ಭವನ ಮತ್ತು ಅದರ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯಡಿ ಹಣ ವಿನಿಯೋಗಿಸಿದ ಘಟನೆ ಮಾರಿಕುಪ್ಪಂನಲ್ಲಿ ನಡೆದಿದೆ.
ಮಾರಿಕುಪ್ಪಂ ಗ್ರಾಮ ಪಂಚಾ ಯಿತಿಯ ಜಲ್ದಿಗಾನಹಳ್ಳಿಯಲ್ಲಿ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣವಾಗಿದೆ. ಅದಕ್ಕೆ ಐದು ವರ್ಷಗಳಿಂದ ಸಿ.ಸಿ ರಸ್ತೆ ಮತ್ತು ಕಾಂಪೌಂಡ್ ನಿರ್ಮಿಸಲಾಗಿದೆ. ಈ ಎಲ್ಲದಕ್ಕೂ ನರೇಗಾ ಯೋಜನೆಯಡಿ ಹಣ ವಿನಿಯೋಗಿಸಲಾಗಿದೆ. ಆದರೆ ವಾಸ್ತವವಾಗಿ ಭವನ ಇರುವ ಜಾಗದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇರುವ ಕಲ್ಲು ಇದೆ. ಅದಕ್ಕೆ ಸೂರು ಸಹ ಇಲ್ಲ. ಇದುವರೆವಿಗೆ ಕಾಂಪೌಂಡ್ ಅನ್ನೂ ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
2018–19ನೇ ಸಾಲಿನಲ್ಲಿ ಚಲ್ದಿಗಾನಹಳ್ಳಿಯ ಅಂಬೇಡ್ಕರ್ ಭವನದ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾ ಅಡಿ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಚಲ್ದಿಗಾನಹಳ್ಳಿಯಲ್ಲಿ ₹5 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ, ಕಾಂಪೌಂಡ್ ಮತ್ತು ಸಿ.ಸಿ. ರಸ್ತೆ ನಿರ್ಮಿಸಿರುವುದಾಗಿ ಲೆಕ್ಕ ತೋರಿಸಲಾಗಿದೆ. ಹೀಗಾಗಿ, ಅಂಬೇಡ್ಕರ್ ಭವನದ ಹೆಸರಿನಲ್ಲಿ ಹಣ ದುರುಪಯೋಗವಾಗಿರುವ ಶಂಕೆ ಇದೆ ಎನ್ನುತ್ತಾರೆ ಗ್ರಾಮಸ್ಥರು.
ಅಂಬೇಡ್ಕರ್ ಭವನಕ್ಕಾಗಿ ಮಾರಿ ಕುಪ್ಪಂ ಪಂಚಾಯಿತಿಯ ಆಸ್ತಿ ಪಟ್ಟಿ ಯಲ್ಲಿ 50*80 ನಿವೇಶನ ನೀಡಲಾಗಿದೆ. ಆದರೆ ಈ ನಿವೇಶನದಲ್ಲಿ ಭವನವೇ ಇಲ್ಲ. ಈ ಜಾಗವೂ ಒತ್ತುವರಿಯಾಗಿದೆ. ಭವನಕ್ಕಾಗಿ ಮೀಸಲಾದ ಜಾಗದಲ್ಲಿ ನೀರಿನ ಟ್ಯಾಂಕ್ ಕೂಡ ಕಟ್ಟಲಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಅಂಬೇಡ್ಕರ್ ಭವನದ ಕುರಿತು ಬಂದ ದೂರು ಐದು ವರ್ಷದ ಹಿಂದಿನದ್ದಾಗಿದೆ. ಕಾಂಪೌಂಡ್ ನಿರ್ಮಾಣವಾಗಿದೆ ಎಂಬ ದಾಖಲೆ ನಮ್ಮಲ್ಲಿ ಇದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.ಜಗದೀಶ್, ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.