ADVERTISEMENT

ಅಂಬೇಡ್ಕರ್ ಜಯಂತಿ: ಗೊಂದಲಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 4:09 IST
Last Updated 31 ಮಾರ್ಚ್ 2022, 4:09 IST
.
.   

ಬಂಗಾರಪೇಟೆ: ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಗೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತ್ಯೇಕ ಕರೆಯೋಲೆ ಹೊರಡಿಸಿ ಮುಖಂಡರು ಹಾಗೂ ಅಧಿಕಾರಿಗಳಲ್ಲಿ ಸೃಷ್ಟಿಸಿದ್ದ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿಯಾದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮುನಿರಾಜು ಅವರು ಶಾಸಕರ ಸೂಚನೆಯಂತೆ ಮಾರ್ಚ್‌ 31ರಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ ನಿಗದಿಗೊಳಿಸಿ ಕರೆಯೋಲೆ ಹಂಚಿಕೆ ಮಾಡಿದ್ದರು.
ಇದಕ್ಕೆ ಆಕ್ಷೇಪ ಎತ್ತಿದ್ದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಎಂ. ದಯಾನಂದ ಶಿಷ್ಟಾಚಾರದಂತೆ ತಾಲ್ಲೂಕು ಕಚೇರಿಯಲ್ಲಿಯೇ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಮತ್ತೊಂದು ಕರೆಯೋಲೆ ಹೊರಡಿಸಿದ್ದರು.

ಅಲ್ಲದೇ, ಪೂರ್ವಭಾವಿ ಸಭೆಗೆ ಮುನ್ನವೇ ಶಾಸಕರು ಹಾಗೂ ತಹಶೀಲ್ದಾರ್ ಅವರು ಪ್ರತ್ಯೇಕವಾಗಿ ತಮ್ಮ ಪರ ಇದ್ದ ದಲಿತ ಮುಖಂಡರ ಸಭೆ ಕರೆದು ಎಲ್ಲಿ ಪೂರ್ವಭಾವಿ ಸಭೆ ನಡೆಸಬೇಕು ಎಂದು ಅಭಿಪ್ರಾಯ ಪಡೆದಿದ್ದರು. ಹಾಗಾಗಿ, ಅಂಬೇಡ್ಕರ್ ಜಯಂತಿ ಪೂರ್ವಭಾವಿ ನಡೆಸುವಲ್ಲಿ ಎರಡು ಗುಂಪುಗಳಾಗಿದ್ದವು. ಆಯಾ ಗುಂಪಿನ ನೇತೃತ್ವವಹಿಸಿದ್ದವರು ಅವರವರು ನಿಗದಿಪಡಿಸಿದ್ದ ಸ್ಥಳದಲ್ಲಿಯೇ ಪೂರ್ವಭಾವಿ ಸಭೆ ನಡೆಸುವುದಾಗಿ ಪಟ್ಟು ಹಿಡಿದಿದ್ದರು. ಅಲ್ಲದೇ, ಎರಡೂ ಗುಂಪುಗಳು ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.

ADVERTISEMENT

ಬುಧವಾರ ಏಕಾಏಕಿ ತನ್ನ ನಿರ್ಣಯ ಬದಲಿಸಿರುವ ತಹಶೀಲ್ದಾರ್ ಎಂ. ದಯಾನಂದ, ಜಿಲ್ಲಾಧಿಕಾರಿಯ ಸೂಚನೆಯಂತೆ ಶಾಸಕರ ಅಧ್ಯಕ್ಷತೆಯಲ್ಲಿ ಮಾರ್ಚ್‌ 31ರಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.