ADVERTISEMENT

ಅಂಬೇಡ್ಕರ್ ಶೋಷಿತರ ಒಳಿತಿಗೆ ಶ್ರಮಿಸಿದ ಮೇಧಾವಿ- ರಾಘವೇಂದ್ರ ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 15:37 IST
Last Updated 13 ಏಪ್ರಿಲ್ 2022, 15:37 IST
ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಘವು ಕೋಲಾರದ ವಿನೋಭಾ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ರ ಭಾವಚಿತ್ರ ಅನಾವರಣಗೊಳಿಸಲಾಯಿತು
ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಘವು ಕೋಲಾರದ ವಿನೋಭಾ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ರ ಭಾವಚಿತ್ರ ಅನಾವರಣಗೊಳಿಸಲಾಯಿತು   

ಕೋಲಾರ: ‘ಜಾಗತಿಕವಾಗಿ ಭಾರತ ದೇಶವು ಉನ್ನತ ಮಟ್ಟಕ್ಕೆ ತಲುಪಲು ಅಂಬೇಡ್ಕರ್‌ ಮುಖ್ಯ ಕಾರಣೀಭೂತರು’ ಎಂದು ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ರಾಘವೇಂದ್ರ ಪ್ರಕಾಶ್ ಹೇಳಿದರು.

ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಘವು ನಗರದ ವಿನೋಭಾ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ, ‘ಅಂಬೇಡ್ಕರ್ ಅವರು ಸಾಮಾಜಿಕ ಕಟ್ಟುಪಾಡುಗಳು, ಶೋಷಣೆ, ಅಸ್ಪೃಶ್ಯತೆಯ ಪಿಡುಗು ದೂರ ಮಾಡಿ ಸಮಾನತೆ ಕಲ್ಪಿಸಿಕೊಟ್ಟ ಕಾರಣ ಭೂಪಟದಲ್ಲಿ ಭಾರತ ರಾರಾಜಿಸುತ್ತಿದೆ’ ಎಂದರು.

‘ಅಂಬೇಡ್ಕರ್‌ ಸಂವಿಧಾನದ ಮೂಲಕ ಹೆಣ್ಣು ಮಕ್ಕಳಿಗೆ ಸ್ವಾತಂತ್ರ ಕಲ್ಪಿಸಿದರು. ಅವರ ಪರಿಶ್ರಮದ ಫಲವಾಗಿ ಮಹಿಳೆಯರೂ ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುತ್ತಿದ್ದಾರೆ. ಅಂಬೇಡ್ಕರ್ ನಿಜಕ್ಕೂ ದೇವಮಾನವ. ಶೋಷಿತರ ಒಳತಿಗಾಗಿ ಹಗಲಿರುಳು ಶ್ರಮಿಸಿದ ಅವರು ವಿಶ್ವವೇ ಕಂಡ ಮೇಧಾವಿ’ ಎಂದು ಬಣ್ಣಿಸಿದರು.

ADVERTISEMENT

‘ಅಂಬೇಡ್ಕರ್‌ ಎಲ್ಲರಿಗೂ ನ್ಯಾಯ, ಎಲ್ಲರಿಗೂ ಸಮಬಾಳು ಎಂಬ ತತ್ವಾದರ್ಶ ಮೈಗೂಡಿಸಿಕೊಂಡು ಯಾವುದೇ ಹಂತದಲ್ಲಿ ತಮ್ಮ ಸಿದ್ಧಾಂತಕ್ಕೆ ಲೋಪವಾಗದಂತೆ ಬದುಕಿದರು. ಸ್ವಾವಲಂಬಿ ಬದುಕು ನಡೆಸಲು ಶಿಕ್ಷಣ ಅಗತ್ಯ. ಅಂಬೇಡ್ಕರ್‌ ದೊರಕಿಸಿ ಕೊಟ್ಟಿರುವ ಸಮಾನತೆಯಲ್ಲಿ ಶಿಕ್ಷಣ ಪಡೆಯುವುದು ನಮ್ಮ ಧ್ಯೇಯವಾಗಬೇಕು’ ಎಂದು ಕಲಾವಿದ ಬಾಲಾಜಿ ಕಿವಿಮಾತು ಹೇಳಿದರು.

‘ಬಸವಣ್ಣ, ಸರ್ವಜ್ಞ ಸೇರಿದಂತೆ ದಾರ್ಶನಿಕರು ತಿಳಿಸಿರುವುದನ್ನು ಅಂಬೇಡ್ಕರ್ ತಮ್ಮ ಜೀವನ ಶೈಲಿ ಮೂಲಕ ಜನರ ಮನಸ್ಸಿನಲ್ಲಿ ಬಿತ್ತಲು ಹೋರಾಟ ನಡೆಸಿದರು. ಅವರು ಒಂದು ಜನಾಂಗದ ಸುಖಕ್ಕಾಗಿ ಹೋರಾಟ ಮಾಡಿದವರಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನ ಹಕ್ಕು ಪಡೆಯಲು ನೆರವಾದರು’ ಎಂದು ಅಭಿಪ್ರಾಯಪಟ್ಟರು.

ದಲಿತ ಮುಖಂಡರಾದ ಮುನಿರಾಜು, ವೆಂಕಟೇಶ್, ನಾರಾಯಣಸ್ವಾಮಿ, ರಾಜಕುಮಾರ್, ಮುನಿಆಂಜನಪ್ಪ, ಸೋಮಶೇಖರ್, ಚೇತನ್‌ಬಾಬು, ಮೋಹನ್, ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಘದ ಸದಸ್ಯರಾದ ಶ್ಯಾಮ್, ಶಶಿಕುಮಾರ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.