ADVERTISEMENT

ಬೇಕಾಬಿಟ್ಟಿ ದರ; ಖಾಸಗಿ ಆ್ಯಂಬುಲೆನ್ಸ್‌ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:56 IST
Last Updated 9 ಅಕ್ಟೋಬರ್ 2025, 2:56 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೃಪೆ: Gemini AI

ಕೋಲಾರ: ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ನಲ್ಲಿ ಸಂಭವಿಸಿದ ಅಪಘಾತವನ್ನೇ ಬಂಡವಾಳವಾಗಿಸಿಕೊಂಡು ಗಾಯಾಳುಗಳನ್ನು ಸಾಗಿಸಲು ಹೆಚ್ಚು ಹಣ ಪಡೆದಿರುವುದಕ್ಕೆ ಅಕ್ರೋಶ ವ್ಯಕ್ತವಾಗಿದೆ.

ADVERTISEMENT

ತುರ್ತು ಸಂದರ್ಭ ಬಳಸಿಕೊಂಡು ಮನಬಂದಂತೆ ಹಣ ಕಿತ್ತುಕೊಳ್ಳುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಗಾಯಾಳು ಸಂಬಂಧಿಸಿಕರು ಆರೋಪಿಸಿದ್ದಾರೆ.

ಬಂಗಾರಪೇಟೆ ತಾಲ್ಲೂಕಿನ ಕಲ್ಕೆರೆ ಬಳಿ ಕಾರಿಡಾರ್‌ನಲ್ಲಿ ಸೋಮವಾರ ರಾತ್ರಿ ಟೆಂಪೊಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, 22 ಮಂದಿ ಗಾಯಗೊಂಡಿದ್ದರು. ವಿಷಯ ತಿಳಿದ ಕೂಡಲೇ ಬಂಗಾರಪೇಟೆಯಿಂದ 2 ಖಾಸಗಿ ಆ್ಯಂಬುಲೆನ್ಸ್‌, 2 ಸರ್ಕಾರಿ ಆ್ಯಂಬುಲೆನ್ಸ್‌ ಸ್ಥಳಕ್ಕೆ ತೆರಳಿವೆ. ಅಲ್ಲದೆ, ಟೋಲ್‍ಗೆ ಸಂಬಂಧಿಸಿದ 1 ಆ್ಯಂಬುಲೆನ್ಸ್‌ ಮತ್ತು ಬೊಲೆರೊ ವಾಹನ ಬಂದಿವೆ. ಮೃತ ದೇಹಗಳನ್ನು ಬೊಲೆರೊ ವಾಹನದಲ್ಲಿ ಹಾಕಿಕೊಂಡು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ತರಲಾಯಿತು.

ಗಾಯಗೊಂಡಿದ್ದವರನ್ನು ಮೊದಲು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕೆಲವರನ್ನು ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ತರಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬಂಗಾರಪೇಟೆಯಿಂದ 3 ಖಾಸಗಿ ಆ್ಯಂಬುಲೆನ್ಸ್‌ಗಳು ಎಸ್‌ಎನ್‌ಆರ್‌ ಆಸ್ಪತ್ರೆಗೆ ಬಂದಿದ್ದು, ಇಲ್ಲಿಂದ ಪುನಃ ಕೋಲಾರದ 3 ಆ್ಯಂಬುಲೆನ್ಸ್‌ಗಳಲ್ಲಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಗಾಯಾಳುಗಳನ್ನು ಕರೆದುಕೊಂಡು ಹೋಗಲಾಯಿತು.

ಬಂಗಾರಪೇಟೆಯಿಂದ ಕೋಲಾರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆ, ಅಲ್ಲಿಂದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಹೋದರೂ ಖಾಸಗಿ ಆ್ಯಂಬುಲೆನ್ಸ್‌ ಒಂದು ವಾಹನಕ್ಕೆ ಕನಿಷ್ಠ ₹4 ಸಾವಿರ ಬಾಡಿಗೆ ಆಗುತ್ತದೆ. ಮೂರು ವಾಹನಕ್ಕೆ ₹12 ಸಾವಿರ ಬಾಡಿಗೆ ನೀಡಬೇಕಾಗುತ್ತದೆ. ಇನ್ನು ಕೋಲಾರ ನಗರದಿಂದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ 3 ವಾಹನ ತೆರಳಿದ್ದು, ಅವುಗಳಿಗೆ ತಲಾ ₹1 ಸಾವಿರ ಅಂದರೂ ₹15 ಸಾವಿರದಲ್ಲಿ ಎಲ್ಲ ವಾಹನಗಳ ಬಾಡಿಗೆ ಮುಗಿದಿರುತ್ತಿತ್ತು.

ಆದರೆ, ಕೆಲ ಖಾಸಗಿ ಆ್ಯಂಬುಲೆನ್ಸ್‌ನವರು ಮೃತಪಟ್ಟಿದ್ದವರ ಹಾಗೂ ಗಾಯಗೊಂಡಿದ್ದವರ ಸಂಬಂಧಿಕರು, ಸ್ನೇಹಿತರ ಬಳಿ ಹಣ ಪೀಕಲು ಮುಂದಾಗಿದ್ದು ಆಕ್ರೋಶ ವ್ಯಕ್ತವಾಗಿದೆ. ಬಂಗಾರಪೇಟೆ, ಕೋಲಾರ, ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಕ್ಕೆ ₹69 ಸಾವಿರ ಬಾಡಿಗೆ ಹೇಳಿರುವುದು ಗೊತ್ತಾಗಿದೆ.

₹40 ಸಾವಿರ ನಗದು ಪಡೆದು, ₹4 ಸಾವಿರ ಫೋನ್ ಪೇನಲ್ಲಿ ಹಾಕಿಸಿಕೊಂಡಿದ್ದಾರೆ. ಇಷ್ಟು ಸಾಲದ್ದಕ್ಕೆ ಉಳಿದ ₹ 25 ಸಾವಿರ ನೀಡುವಂತೆ ಆರ್.ಎಲ್. ಜಾಲಪ್ಪ ಆಸ್ಪತ್ರೆ ಬಳಿ ಪೀಡಿಸಿರುವುದು ತಿಳಿದುಬಂದಿದೆ.

ಘಟನೆ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ನೂರಾರು ಮಂದಿ ಬರಲಾರಂಭಿಸಿದರು. ಖಾಸಗಿ ಆ್ಯಂಬುಲೆನ್ಸ್‌ನವರ ಈ ವಿಚಾರ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಗಾಯಾಳುಗಳ ಸಂಬಂಧಿಕರು, ‘ನಾವೂ ಸ್ಥಳೀಯರೇ, ನಮಗೂ ಎಲ್ಲಾ ಗೊತ್ತಿದೆ. ತಮಗೆ ಸ್ವಲ್ಪವೂ ಕರುಣೆ ಎನ್ನುವುದು ಇಲ್ಲವೇ? ಇಷ್ಟ ಬಂದಂತೆ ಹಣ ವಸೂಲಿಗೆ ಇಳಿದಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಗಲ್‍ಪೇಟೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ, ಅಲ್ಲದೆ ಚಾಲಕರುಗಳು ಆ್ಯಂಬುಲೆನ್ಸ್‌ ಸಮೇತ ಆಸ್ಪತ್ರೆ ಬಳಿಯಿಂದ ಪರಾರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.