ADVERTISEMENT

10ಕ್ಕೆ ಅಂಗನವಾಡಿ ಬಂದ್: ಅನಿರ್ದಿಷ್ಟಾವಧಿ ಧರಣಿ- ವರಲಕ್ಷ್ಮೀ ಹೇಳಿಕೆ

ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 14:35 IST
Last Updated 20 ಡಿಸೆಂಬರ್ 2021, 14:35 IST
ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಕೋಲಾರ: ‘ರಾಷ್ಟ್ರೀಯ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ವಿರೋಧಿಸಿ ಹಾಗೂ ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ.10ರಿಂದ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಎನ್ಇಪಿ ಜಾರಿಯಾದರೆಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ. ಅಂಗನವಾಡಿಗಳಿಗೆ ಬಜೆಟ್‌ನಲ್ಲಿ ಕೊಡಬೇಕಾದ ಅನುದಾನ ಸಹ ಬಿಡುಗಡೆ ಮಾಡಿಲ್ಲ. ಸರ್ಕಾರದ ಎಲ್ಲಾ ಕೆಲಸಗಳಿಗೆ ಅಂಗನವಾಡಿ ನೌಕರರು ಬೇಕು. ಆದರೆ, ನೌಕರರಿಗೆ ಯಾವುದೇ ಸೌಕರ್ಯ ಒದಗಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೋವಿಡ್ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎನ್‌ಇಪಿ ಜಾರಿಗೆ ತಂದಿದೆ. ರಾಜ್ಯದಲ್ಲಿ ಎನ್‌ಇಪಿ ಜಾರಿ ವಿಚಾರವಾಗಿ ಸರ್ಕಾರ ಸಂಘಟನೆಗಳ ಜತೆ ಚರ್ಚಿಸಿಲ್ಲ. ಎನ್‍ಇಪಿ ಸಂಪೂರ್ಣವಾಗಿ ಖಾಸಗೀಕರಣ ಮತ್ತು ವಾಣಿಜ್ಯೀಕರಣ ಅಂಶಗಳನ್ನು ಒಳಗೊಂಡಿದೆ’ ಎಂದು ಆರೋಪಿಸಿದರು.

ADVERTISEMENT

‘ಐಸಿಡಿಎಸ್ ಯೋಜನೆಯಲ್ಲಿ ಕೇವಲ 36 ತಿಂಗಳ ಮಗುವಿನಿಂದ 5 ವರ್ಷ 10 ತಿಂಗಳವರೆಗಿನ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಲಾಗುತ್ತಿದ್ದರು. ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಅನಿಯಮಿತವಾಗಿ ಎಲ್‌ಕೆಜಿ ಮತ್ತು ಯುಕೆಜಿ ತೆರೆದಿದ್ದರಿಂದ ಅಂಗನವಾಡಿ ಮಕ್ಕಳನ್ನು ಅಲ್ಲಿ ದಾಖಲು ಮಾಡಿದ್ದರಿಂದ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾತಿ ಕುಸಿಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘5 ವರ್ಷ ತುಂಬುವುದಕ್ಕೂ ಮೊದಲು ಎನ್‍ಇಪಿ ಪ್ರಕಾರ ಮಕ್ಕಳಿಗೆ ಬಾಲವಾಟಿಕಾ ಎಂಬ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಅಂಗನವಾಡಿಗಳಲ್ಲಿ ಕೇವಲ 3 ವರ್ಷದ ಮಕ್ಕಳು ಮಾತ್ರ ಇರುತ್ತಾರೆ. ಅಂಗನವಾಡಿ ಕೇಂದ್ರಗಳಲ್ಲಿ ಮುಂದೆ ಮಕ್ಕಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು’ ಎಂದು ಅಭಿಪ್ರಾಯಪಟ್ಟರು.

ಐಸಿಡಿಎಸ್‌ಗೆ ಸೀಮಿತಗೊಳಿಸಿ: ‘ಅಂಗನವಾಡಿ ನೌಕರರನ್ನು ಐಸಿಡಿಎಸ್‌ ಸೇವೆಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಐಸಿಡಿಎಸ್ ಬಿಟ್ಟು ಬೇರ ಕೆಲಸಗಳಿಗೆ ನಿಯೋಜಿಸುವುದನ್ನು ನಿರ್ಬಂಧಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿ ಎಂದು ಗುರುತಿಸಬೇಕು. ಅಂಗನವಾಡಿ ನೌಕರರಿಗೆ ತರಬೇತಿ ನೀಡಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಡಬೇಕು. ಅಂಗನವಾಡಿಗಳಿಗೆ ಹೆಚ್ಚುವರಿ ಸಹಾಯಕಿಯರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

‘ಅಂಗನವಾಡಿಗಳ ಮೂಲಸೌಕರ್ಯ ಸಮಸ್ಯೆ ಪರಿಹರಿಸಬೇಕು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಷೂ ಮತ್ತು ವಿದ್ಯಾಭ್ಯಾಸದ ಪರಿಕರ ಕೊಡಬೇಕು. ನೌಕರರ ವೇತನ ಹೆಚ್ಚಿಸಬೇಕು. ಕೊರೊನಾ ಸೋಂಕಿನಿಂದ ಮೃತಪಟ್ಟರ ಅಂಗನವಾಡಿ ನೌಕರರಿಗೆ ₹ 30 ಲಕ್ಷ ಪರಿಹಾರ ಕೊಡುವುದು ಸೇರಿದಂತೆ 25ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ, ಜಿಲ್ಲಾ ಅಂಗನವಾಡಿ ನೌಕರರ ಸಂಘದ ಸದಸ್ಯರಾದ ಸುಜಾತಾ, ಲಕ್ಷ್ಮೀದೇವಮ್ಮ, ಕಲ್ಪನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.