
ಪ್ರಜಾವಾಣಿ ವಾರ್ತೆ
ಕೋಲಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಗರ ಸಮೀಪದ ಅಂತರಗಂಗೆಯ ಕಾಶಿ ವಿಶ್ವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಜಾತ್ರೆ, ವಿಶೇಷ ಪೂಜೆ ನಡೆದಿದ್ದು, ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವಿಶ್ವೇಶ್ವರ ಸ್ವಾಮಿ ದರ್ಶನ ಪಡೆದು, ಕಲ್ಯಾಣಿ ಸಮೀಪದ ಕಲ್ಲಿನ ಬಸವನ ಬಾಯಿಂದ ಬರುವ ಪವಿತ್ರ ಜಲ ಪ್ರೋಕ್ಷಣೆ ಮಾಡಿಕೊಂಡರು. ಕಲ್ಲಿನ ಬಸವನ ಬಾಯಿಂದ ಬರುವ ನೀರು ಪವಿತ್ರ ಗಂಗಾನದಿಯಿಂದಲೇ ಬರುತ್ತಿದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ. ಸ್ವಾಮಿಯ ದರ್ಶನಕ್ಕೆ ಉದ್ದುದ್ದ ಸರದಿ ಸಾಲು ಕಂಡು ಬಂತು.
ಮುಂಜಾನೆಯ ಚಳಿಯಲ್ಲೂ ಭಕ್ತರು ಅಂತರಗಂಗೆ ಬೆಟ್ಟದತ್ತ ದಾಪುಗಾಲು ಹಾಕಿದ್ದು ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನಿಂದ ಉಚಿತ ಸಾರಿಗೆ, ಅನ್ನದಾಸೋಹ ಸೇರಿದಂತೆ ವಿವಿಧ ವ್ಯವಸ್ಥೆ ಮಾಡಲಾಗಿತ್ತು.
ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರದಂದು ವಿಶೇಷ ಪೂಜೆ, ಅಭಿಷೇಕ ನಡೆಯುತ್ತದೆ. ಕಾರ್ತಿಕ ಮಾಸದ ಕೊನೆ ಸೋಮವಾರ ಜಾತ್ರೆ ನಡೆಯುತ್ತದೆ.
ಪ್ರಾತಃ ಕಾಲದಲ್ಲಿ ವಿಶೇಷ ಫಲ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಅಲಂಕಾರ, ಅರ್ಚನೆ, ಮಹಾಮಂಗಳಾರತಿ, ಪೂಜಾ ಕಾರ್ಯಕ್ರಮಗಳು ಪ್ರಧಾನ ಅರ್ಚಕ ಕೆ.ಎಸ್.ಮಂಜುನಾಥ ದೀಕ್ಷಿತ್ ಹಾಗೂ ವೆಂಕಟೇಶ್ ದೀಕ್ಷಿತ್ ನೆರವೇರಿಸಿದರು.
ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಭಕ್ತಾದಿಗಳಿಗೆ ಸುಸ್ವಾಗತ ಕೋರುವ ಬೃಹತ್ ಕಮಾನುಗಳೊಂದಿಗೆ ಇಡೀ ಪ್ರದೇಶ ಕೇಸರೀಮಯವಾಗಿತ್ತು. ಬಜರಂಗದಳದ ಬೃಹತ್ ಕಮಾನುಗಳು, ಬಂಟಿಂಗ್‍ಗಳು, ಭಗವಧ್ವಜಗಳೊಂದಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಬೆಟ್ಟದ ತಪ್ಪಲಲ್ಲಿನ ಜಲಕಂಠೇಶ್ವರ ಸನ್ನಿಧಿಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಗೋಕುಲ ಮಿತ್ರಬಳಗ ಸೇರಿದಂತೆ ವಿವಿಧ ಸಂಘಟನೆಗಳಿಂದ ಉಚಿತ ಅನ್ನದಾನ ಮತ್ತು ಪ್ರಸಾದ ವಿನಿಯೋಗ ಇಡೀ ದಿನ ನಡೆಯಿತು.
ಉಚಿತ ಬಸ್ ಸೇವೆಗೆ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಚಾಲನೆ ನೀಡಿದರು.
ಓಂಶಕ್ತಿ ಚಲಪತಿ ಮಾತನಾಡಿ, ‘ಹಿಂದೂಗಳ ಪವಿತ್ರ ಕ್ಷೇತ್ರವಾದ ಅಂತರಗಂಗೆಯ ಅಭಿವೃದ್ದಿಗೆ ಮತ್ತಷ್ಟು ಸ್ಪಂದನೆ ಅಗತ್ಯವಿದೆ. ಪ್ರತಿ ವರ್ಷ ನಿರಂತರವಾಗಿ ಉಚಿತ ಬಸ್ ಸೇವೆ ಒದಗಿಸುವ ಮೂಲಕ ಹಿಂದೂ ಸಂಘಟನೆಗಳು ಈ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಲು ಕಾರಣವಾಗಿದೆ’ ಎಂದರು.
ಸಿಎಂಆರ್.ಶ್ರೀನಾಥ್ ಮಾತನಾಡಿ, ‘ಜಿಲ್ಲೆಗೆ ಒಳ್ಳೆಯ ಮಳೆ, ಬೆಳೆಯಾಗಲಿ. ಜನತೆ ಶಾಂತಿ ನೆಮ್ಮದಿಯಿಂದ ಇರಲು ದಕ್ಷಿಣ ಕಾಶಿ ವಿಶ್ವೇಶ್ವರ ಆಶೀರ್ವದಿಸಲಿ’ ಎಂದು ಪ್ರಾರ್ಥಿಸಿದರು.
ಶಿವಲಿಂಗ ದರ್ಶನಕ್ಕೆ ಸುಗಮ ವ್ಯವಸ್ಥೆ ಮಾಡಿಕೊಡಲು ಹಲವು ಸ್ವಯಂ ಸೇವಕರು ಕಾರ್ಯನಿರ್ವಹಿಸಿದರು.
ಬಜರಂಗದಳ ಮುಖಂಡ ಬಾಲಾಜಿ, ಬಾಬು,ಅಪ್ಪಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ವಿಜಯಕುಮಾರ್, ಬಿಜೆಪಿ ನಗರ ಘಟಕ ಯುವಮೋರ್ಚಾ ಅಧ್ಯಕ್ಷ ಸಾಯಮೌಳಿ, ವಿಶ್ವನಾಥ್, ಮಂಜು, ದೀಪು, ಸಾಯಿಸುಮನ್, ರಾಜೇಶ್, ಭವಾನಿ, ವೆಂಕಿ, ಯಶ್, ವಿಶಾಖ, ಮಹೇಶ್, ಸಾಯಿಕುಮಾರ್, ಪ್ರವೀಣ್, ಪ್ರಸನ್ನ, ಗೌತಮ್, ಹರೀಶ್, ಗಿರಿ, ಕಿರಣ್, ಸೋಮಶೇಖರ್, ಆನಂದ್, ಅರ್ಜುನ್, ಸುಧಾಕರ್, ಮೋಹನ್, ನಿತಿನ್, ಪವನ್, ನಿಥುನ್, ಸೋಮು, ಗೌತಮ್, ಮುರಳಿ, ದರ್ಶನ್, ಜಗದೀಶ್, ವಿನಯ್,ಲೋಹಿತ್,ರಾಮು, ನಾಮಲ ಮಂಜು, ಸಾಮಾಬಾಬು ಸೇರಿದಂತೆ ಹಲವರು ಸ್ವಯಂಸೇವಕರಾಗಿ ಭಕ್ತರಿಗೆ ನೆರವಾದರು.
Highlights - ಬಜರಂಗದಳ, ವಿಎಚ್‌ಪಿಯಿಂದ ವಿಶೇಷ ವ್ಯವಸ್ಥೆ ಕೇಸರಿಮಯವಾಗಿದ್ದ ಬಸ್ ನಿಲ್ದಾಣ ವೃತ್ತ ನಗರದಿಂದ ಅಂತರಗಂಗೆ ಬೆಟ್ಟದವರೆಗೆ ಉಚಿತ ಬಸ್ ವ್ಯವಸ್ಥೆ
Cut-off box - ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸೋಮೇಶ್ವರ ದೇವಸ್ಥಾನ ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಸೋಮೇಶ್ವರ ಸ್ವಾಮಿ ದರ್ಶನ ಪಡೆದ ಮಹಿಳೆಯರು ನಂದಿ ಮುಂದೆ ದೀಪ ಹಚ್ಚಿ ಹರಕೆ ತೀರಿಸಿದರು. ಶಿವನ ದೇಗುಲಗಳಲ್ಲಿ ವಿಶೇಷ ಅಲಂಕಾರ ಮಾಡಿ ವಿವಿಧ ಪೂಜೆ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.