ADVERTISEMENT

ಹೆಚ್ಚಿನ ವೈದ್ಯಕೀಯ ಸೌಲಭ್ಯಕ್ಕೆ ಮನವಿ: ಸಿ.ಎಂ ಭೇಟಿಯಾದ ಶಾಸಕರ ನಿಯೋಗ

​ಪ್ರಜಾವಾಣಿ ವಾರ್ತೆ
Published 6 ಮೇ 2021, 16:30 IST
Last Updated 6 ಮೇ 2021, 16:30 IST
ಕೋವಿಡ್ ನಿಯಂತ್ರಣಕ್ಕಾಗಿ ಕೋಲಾರ ಜಿಲ್ಲೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಜಿಲ್ಲೆಯ ಶಾಸಕರ ನಿಯೋಗವು ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.
ಕೋವಿಡ್ ನಿಯಂತ್ರಣಕ್ಕಾಗಿ ಕೋಲಾರ ಜಿಲ್ಲೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಜಿಲ್ಲೆಯ ಶಾಸಕರ ನಿಯೋಗವು ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.   

ಕೋಲಾರ: ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲೆಗೆ ಹೆಚ್ಚಿನ ವೈದ್ಯಕೀಯ ಸವಲತ್ತು ಕಲ್ಪಿಸುವಂತೆ ಜಿಲ್ಲೆಯ ಶಾಸಕರ ನಿಯೋಗವು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿತು.

ಮುಳಬಾಗಿಲು ಶಾಸಕ ಹಾಗೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ನಾಗೇಶ್‌ ನೇತೃತ್ವದಲ್ಲಿ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿ ಸಂಬಂಧ ವಿಸ್ತೃತ ಚರ್ಚೆ ನಡೆಸಿದರು.

‘ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಹೆಚ್ಚಳವಾಗುತ್ತಿದ್ದು, ಜನ ಆತಂಕಗೊಂಡಿದ್ದಾರೆ. ಜಿಲ್ಲೆಯ ಬಹುಪಾಲು ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿವೆ. ದೇಹಸ್ಥಿತಿ ಗಂಭೀರವಿರುವ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಬೆಡ್‌ ಮತ್ತು ವೈದ್ಯಕೀಯ ಆಮ್ಲಜನಕ ಸಿಗುತ್ತಿಲ್ಲ. ಇದರಿಂದ ಸೋಂಕಿತರ ಸಾವಿನ ಪ್ರಮಾಣ ಹೆಚ್ಚುತ್ತಿದೆ’ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಬಹುಪಾಲು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಹಾಗೂ ಸಲಕರಣೆಗಳ ಕೊರತೆ ಇದೆ. ಹೀಗಾಗಿ ಸೋಂಕಿತರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಕೋವಿಡ್‌ ಕಾರಣಕ್ಕೆ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಿದ್ದು, ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಮಾಡಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಸಾಕಷ್ಟು ಮಂದಿ ಜಿಲ್ಲೆಗೆ ಬಂದು ಹೋಗುತ್ತಿದ್ದಾರೆ. ಇದು ಸೋಂಕು ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತಿದೆ. ಜನರ ವಲಸೆಗೆ ಕಡಿವಾಣ ಹಾಕಬೇಕು. ಕೋವಿಡ್‌ ವರದಿ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿನ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು’ ಎಂದು ಶಾಸಕರು ಕೋರಿದರು.

ಲಸಿಕೆ ನೀಡಿಕೆ: ‘ವೈದ್ಯಕೀಯ ಆಮ್ಲಜನಕದ ಸಂಪರ್ಕವುಳ್ಳ ಐಸಿಯು ಬೆಡ್‌ ಸಂಖ್ಯೆ ಹೆಚ್ಚಿಸಬೇಕು. ಕೋವಿಡ್‌ ಲಸಿಕೆ ನೀಡಿಕೆ ಚುರುಕುಗೊಳಿಸಬೇಕು. ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ರೆಮ್‌ಡಿಸಿವರ್ ಮತ್ತು ಕೋವಿಡ್‌ ಲಸಿಕೆ ಸರಬರಾಜು ಮಾಡಬೇಕು. ಜತೆಗೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಘಟಕಗಳನ್ನು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲೆಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.