ADVERTISEMENT

ಅಮೆಜಾನ್ ಕಂಪನಿ ವಸ್ತುಗಳ ಕಳವು ಪ್ರಕರಣ: ₹1.52 ಕೋಟಿ ವಸ್ತುಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 15:29 IST
Last Updated 20 ನವೆಂಬರ್ 2021, 15:29 IST
ಅಮೆಜಾನ್‌ ಕಂಪನಿಗೆ ಸೇರಿದ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸ್‌ ತಂಡದ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ಕೋಲಾರದಲ್ಲಿ ಶನಿವಾರ ಪ್ರಶಂಸನಾ ಪತ್ರ ನೀಡಿದರು
ಅಮೆಜಾನ್‌ ಕಂಪನಿಗೆ ಸೇರಿದ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸ್‌ ತಂಡದ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ಕೋಲಾರದಲ್ಲಿ ಶನಿವಾರ ಪ್ರಶಂಸನಾ ಪತ್ರ ನೀಡಿದರು   

ಕೋಲಾರ: ಅಮೆಜಾನ್‌ ಕಂಪನಿಗೆ ಸೇರಿದ ಸುಮಾರು ₹ 1.64 ಕೋಟಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ನಗರ ಪೊಲೀಸರು ₹ 1.52 ಕೋಟಿ ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಲಾರಿ ಚಾಲಕ ಅಸ್ಸಾಂನ ಬದ್ರುಲ್ ಹಕ್, ಅಬ್ದುಲ್ ಹುಸೇನ್, ಅಭಿನಾಥ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಎನ್.ಹೊಸಹಳ್ಳಿ ಗ್ರಾಮದ ಪ್ರದೀಪ್‍ಕುಮಾರ್ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸರಕು ಸಾಗಣೆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆಜಾನ್‌ ಕಂಪನಿ ಜತೆ ವಾಣಿಜ್ಯ ಪಾಲುದಾರ ಏಜೆನ್ಸಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಚೇಳೂರಿನ ನಿಖೋ ಲಾಜಿಸ್ಟಿಕ್ಸ್ ಟ್ರಾವೆಲ್ಸ್ ಮತ್ತು ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಲಾರಿಯಲ್ಲಿ ಅ.30ರಂದು ಗೃಹೋಪಯೋಗಿ ಉಪಕರಣಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಮೊಬೈಲ್‌, ಉಡುಪುಗಳು, ದಿನಬಳಕೆ ವಸ್ತುಗಳು ಹಾಗೂ ಸೌಂದರ್ಯ ವರ್ಧಕಗಳು ಸೇರಿದಂತೆ 300 ಬಗೆಯ 4,027 ವಸ್ತುಗಳನ್ನು ಸಾಗಿಸುವಾಗ ಕಳವು ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಲಾರಿಯು ಅ.20ರಂದು ಬೆಳಗಿನ ಜಾವ ದೇವನಹಳ್ಳಿ ಬಳಿಯಿಂದ ಬೆಂಗಳೂರಿನ ಕೊಡಿಗೇಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಚಾಲಕ ಬದ್ರುಲ್ ಹಕ್ ಇತರೆ ಆರೋಪಿಗಳ ಜತೆ ಸೇರಿ ಲಾರಿಸಮೇತ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಬಳಿಕ ‌ಲಾರಿಯನ್ನು ಕೋಲಾರ ತಾಲ್ಲೂಕಿನ ಚುಂಚದೇನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಲ್ಲಿಸಿ ಆರೋಪಿಗಳು ನಾಪತ್ತೆಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳವು ಸಂಬಂಧ ನಿಖೋ ಲಾಜಿಸ್ಟಿಕ್ಸ್ ಟ್ರಾವೆಲ್ಸ್ ಮತ್ತು ಟ್ರಾನ್ಸ್‌ಪೋರ್ಟ್‌ ಏಜೆನ್ಸಿ ವ್ಯವಸ್ಥಾಪಕರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ಅವರು ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್‌ ತಂಡ ರಚಿಸಿದ್ದರು. ಪೊಲೀಸರು ಆರೋಪಿಗಳ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.