ಕೋಲಾರ: ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದ ಬೆನ್ನಲೇ ಕೋಲಾರ ನಗರದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಹೋಟೆಲ್ ಹಾಗೂ ರಸ್ತೆ ಬದಿ ತಿನಿಸು ಅಂಗಡಿಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬಂಗಾರಪೇಟೆ ವೃತ್ತ, ರಸ್ತೆ ಸೇರಿದಂತೆ ವಿವಿಧೆಡೆ ತೆರಳಿ ಇಡ್ಲಿ ತಯಾರಿಕೆಯ ಪ್ಲೇಟ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸಿದರು.
ಪ್ರಮುಖವಾಗಿ ಬೀದಿ ಬದಿ ಇಡ್ಲಿ ತಯಾರಿಕೆಯಲ್ಲಿ ಕೆಲವರು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡುಬಂತು. ಅಲ್ಲದೇ, ತಟ್ಟೆಗೆ ಪ್ಲಾಸ್ಟಿಕ್ ಹಾಕಿ ತಿನ್ನಲು ಕೊಡುತ್ತಿದ್ದ ದೃಶ್ಯಗಳು ಕಂಡುಬಂದವು. ಇನ್ನುಮುಂದೆ ಬಳಕೆ ಮಾಡದಂತೆ ವ್ಯಾಪಾರಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಕೆಲ ಹೋಟೆಲ್‌ಗಳಿಗೂ ದಿಢೀರನೇ ತೆರಳಿ ಪರಿಶೀಲಿಸಿದರು. ಬಳಕೆ ಮಾಡುತ್ತಿದ್ದ ನಗರದ ಒಂದು ಪ್ರಮುಖ ಹೋಟೆಲ್‌ಗೆ ನೋಟಿಸ್ ಕೂಡ ನೀಡಿದರು.
ಬಹುತೇಕ ಹೋಟೆಲ್‌ಗಳಲ್ಲಿ ಹಾಗೂ ರಸ್ತೆ ಬದಿ ತಿನಿಸು ಅಂಗಡಿಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲೇಟ್‌ನಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವ ದೂರುಗಳು ಸಾರ್ವಜನಿಕರಿಂದಲೂ ಈಚೆಗೆ ಬಂದಿದ್ದವು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ರಾಕೇಶ್ ಅವರ ತಂಡ ನಗರದೆಲ್ಲೆಡೆ ಪರಿಶೀಲನೆ ನಡೆಸಿ ಆಹಾರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೋಟೆಲ್ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ತಾಕೀತು ಮಾಡಿತು. ಅಲ್ಲದೇ, ಅಂಗಡಿಗಳಲ್ಲಿ ಬಳಸುತ್ತಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದು ಕೊಂಡೊಯ್ದರು.
’ಪ್ಲಾಸ್ಟಿಕ್ ಬಳಕೆ ಮಾಡದಂತೆ ಹೋಟೆಲ್ ಹಾಗೂ ರಸ್ತೆ ಬದಿಯ ಇಡ್ಲಿ ಅಂಗಡಿಯವರಿಗೆ ಸೂಚಿಸಲಾಗಿದೆ. ಬಳಕೆ ಮಾಡುತ್ತಿದ್ದವರಿಗೆ ನೋಟಿಸ್ ನೀಡಿದ್ದೇವೆ. ಮತ್ತೆ ಯಾರಾದರೂ ಬಳಕೆ ಮಾಡಿದ್ದು ಕಂಡುಬಂದರೆ ದಂಡ ವಿಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಕಲ್ಲಂಗಡಿ ಹಣ್ಣಿನ ಮಾದರಿಯನ್ನೂ ಪಡೆದಿದ್ದೇವೆ’ ಎಂದು ಇಲಾಖೆಯ ಅಂಕಿತ ಅಧಿಕಾರಿ ಡಾ.ರಾಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಡಾ.ರಾಕೇಶ್ ಮತ್ತು ತಂಡದವರು ರಸ್ತೆ ಬದಿ ಕಲ್ಲಂಗಡಿ ಹಣ್ಣು ಮಾರಾಟ ಮಳಿಗೆಗಳಿಗೂ ದಿಢೀರ್ ಭೇಟಿ ನೀಡಿದರು. ಕಲ್ಲಂಗಡಿ ಹಣ್ಣು ಕೊಯ್ದು ಪೇಪರ್‌ನಲ್ಲಿ ಉಜ್ಜಿ ಪರಿಶೀಲಿಸಿದರು. ಕಲ್ಲಂಗಡಿ ಹಣ್ಣಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿಕೊಡಲು ಕೊಂಡೊಯ್ದರು. ಕೃತಕ ಬಣ್ಣ ಬಳಸದಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.
ಹಾನಿಕಾರಕ ಅಂಶ: ಪ್ಲಾಸ್ಟಿಕ್ ಹಾಳೆ ಬಳಸಿ ತಯಾರಿಸಿದ ಇಡ್ಲಿ ಅಸುರಕ್ಷಿತ ಎಂಬುದು ಪರೀಕ್ಷೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎರಡು ದಿನಗಳ ಹಿಂದೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು, ಹಾನಿಕಾರಕ ರಾಸಾಯನಿಕ ಅಂಶಗಳಿವೆ ಎಂಬುದು ಗೊತ್ತಾಗಿದೆ. ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಅನ್ನು ಹೆಚ್ಚಿನ ಶಾಖಕ್ಕೆ ಒಡ್ಡಿದಾಗ ಬಿಸ್ಫೆನಾಲ್ ಎ (ಬಿಪಿಎ) ಮತ್ತು ಥಾಲೇಟ್ ಒಳಗೊಂಡ ವಿಷಕಾರಿ ರಾಸಾಯನಿಕ ಬಿಡುಗಡೆಯಾಗುತ್ತದೆ ಎಂಬುದಾಗಿ ತಜ್ಞರು ಹೇಳಿದ್ದಾರೆ.
ಇನ್ನುಮುಂದೆ ಪ್ಲಾಸ್ಟಿಕ್ ಬಳಸಿದವರ ಮೇಲೆ ದಂಡ ವಿಧಿಸುವುದು ಸೇರಿ ವಿವಿಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಭಾರತ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿರ್ದೇಶನ ನೀಡಿದೆ.
ಕೃತಕ ಬಣ್ಣ: ಹಾಗೆಯೇ ಗ್ರಾಹಕರನ್ನು ತಮ್ಮ ಮಳಿಗೆಗಳತ್ತ ಸೆಳೆಯಲು ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಹಾಕಿ ಮಾರಾಟ ಮಾಡುತ್ತಿರುವ ಆರೋಪವಿದೆ. ಹೀಗಾಗಿ, ಕೃತಕ ಬಣ್ಣ ಬಳಸುವುದನ್ನೂ ನಿಷೇಧಿಸಿದ್ದು, ದಾಳಿ ನಡೆಸಿ ಪರಿಶೀಲಿಸಲಾಗುತ್ತಿದೆ.
ಹಳದಿ ಕಲ್ಲಂಗಡಿ ಹಣ್ಣು–ಎಚ್ಚರಿಕೆ
ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾಗ ಒಂದು ಕಡೆ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಿದ್ದದ್ದು ಕಂಡುಬಂದಿದೆ. ‘ಎಲ್ಲಾದರೂ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ನೋಡಿದ್ದೀರಾ? ನಾವು ಪತ್ತೆ ಮಾಡಿದ್ದೇವೆ. ಮೇಲಿನ ಭಾಗ ಸಂಪೂರ್ಣ ಹಸಿರಿನಿಂದ ಕೂಡಿದೆ ಒಳಗಡೆ ಹಣ್ಣು ಮಾತ್ರ ಹಳದಿ ಬಣ್ಣದಿಂದ ಕೂಡಿದೆ. ಎಲ್ಲಾ ಖಾಲಿಯಾಗಿ ಅದೊಂದೇ ಹಣ್ಣು ಪತ್ತೆಯಾಗಿದ್ದು ಅದನ್ನೂ ಕುಯ್ದಿಟ್ಟಿದ್ದರು. ಇಂಥ ಹಣ್ಣು ಸಿಕ್ಕರೆ ತರಲು ಹೇಳಿದ್ದು ಪ್ರಯೋಗಾಲಯಕ್ಕೆ ಕಳಿಸುತ್ತೇವೆ. ಈ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು’ ಎಂದು ಇಲಾಖೆಯ ಅಂಕಿತ ಅಧಿಕಾರಿ ಡಾ.ರಾಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಇನ್ನೊಂದು ಕಲ್ಲಂಗಡಿಯ ಮೇಲಿನ ಭಾಗ ಪೂರ್ಣ ಹಳದಿ ಬಣ್ಣದಿಂದ ಕೂಡಿತ್ತು. ಒಳಗಡೆ ಹಣ್ಣು ಕೆಂಪು ಇತ್ತು. ಇದನ್ನು ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ’ ಎಂದರು.
ಜಾಲತಾಣದಲ್ಲಿ ಸುಳ್ಳು ಸುದ್ದಿ-ಆಕ್ರೋಶ
ಕಲ್ಲಂಗಡಿ ಹಣ್ಣಿಗೆ ಕೃತಕವಾಗಿ ಕೆಂಪು ಬಣ್ಣ ಬರುವಂತೆ ಮಾಡಲು ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿ ಕಲ್ಲಂಗಡಿ ಬೆಳೆಗೆ ಬೆಲೆ ಇಲ್ಲದಂತಾಗುತ್ತಿದೆ ಎಂದು ಕಲ್ಲಂಗಡಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಲ್ಲಂಗಡಿ ಬೀಜ ನಾಟಿ ಮಾಡಿದ 90 ದಿನಕ್ಕೆ ಕಾಯಿ ಕಟಾವಿಗೆ ಬರುತ್ತದೆ. ಈಗ ಬೇಸಿಗೆ ಕಾಲ ಆಗಿರುವುದರಿಂದ ಕಲ್ಲಂಗಡಿ ಬೆಳೆಗೆ 75 ದಿನ ತುಂಬುತ್ತಿದ್ದಂತೆ ನೈಸರ್ಗಿಕವಾಗಿಯೇ ಕಲ್ಲಂಗಡಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಚುಚ್ಚುಮದ್ದು ನೀಡುವ ಅವಶ್ಯ ಇರುವುದಿಲ್ಲ. ಸುಳ್ಳು ಸುದ್ದಿ ಹರಡಿಸಿ ರೈತರು ಬೆಳೆದ ಬೆಳೆಗೆ ಬೆಲೆ ಬಾರದಂತೆ ಮಾಡಲು ಕೆಲ ಕಿಡಿಗೇಡಿಗಳು ಸಂಚು ರೂಪಿಸುತ್ತಿದ್ದಾರೆ’ ಎಂದಿದ್ದಾರೆ.
‘ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆಯವರು ಅಂಗಡಿಗಳಲ್ಲಿ ಕಲ್ಲಂಗಡಿ ಮಾದರಿ ತೆಗೆದುಕೊಂಡು ಹೋಗಿ ಪರೀಕ್ಷಿಸಬೇಕು. ಈ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ ಆತಂಕ ದೂರ ಮಾಡಬೇಕು’ ಎಂದು ಕಲ್ಲಂಗಡಿ ಬೆಳೆಗಾರ ಕಾರ್ತಿಕ್ ರೆಡ್ಡಿ ಆಗ್ರಹಿಸಿದ್ದಾರೆ.
ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಸುತ್ತಿದ್ದ ಕೆಎಸ್‌ಆರ್‌ಟಿಸ್ ಬಸ್ ನಿಲ್ದಾಣದ ಹೋಟೆಲ್‌ವೊಂದಕ್ಕೆ ನೋಟಿಸ್ ನೀಡಲಾಗಿದೆ. ಕಲ್ಲಂಗಡಿ ಮಾದರಿ ಪಡೆದಿದ್ದು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದುಡಾ.ರಾಕೇಶ್ , ಅಂಕಿತ ಅಧಿಕಾರಿ ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆ ಕೋಲಾರ
ಕಲ್ಲಂಗಡಿಗೆ ಕೃತ ಬಣ ಅಳವಡಿಕೆ ದೂರು ಬಂದ ಹಿನ್ನೆಲೆಯಲ್ಲಿ ಕೋಲಾರ ನಗರದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಲ್ಲಂಗಡಿ ಹಣ್ಣು ಪರಿಶೀಲಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.