ADVERTISEMENT

ಮುಳಬಾಗಿಲು: ಕಬಾಬ್, ಗೋಬಿ ಮಂಚೂರಿಗಳಿಗೆ ಕೃತಕ ಬಣ್ಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 15:33 IST
Last Updated 2 ಸೆಪ್ಟೆಂಬರ್ 2024, 15:33 IST
ಮುಳಬಾಗಿಲು ನಗರದ ಹೋಟೆಲ್ ಒಂದರಲ್ಲಿ ಕೃತಕ ಬಣ್ಣ ಬಳಸಿ ಕಬಾಬ್‌ ಮಾಡಿರುವುದು
ಮುಳಬಾಗಿಲು ನಗರದ ಹೋಟೆಲ್ ಒಂದರಲ್ಲಿ ಕೃತಕ ಬಣ್ಣ ಬಳಸಿ ಕಬಾಬ್‌ ಮಾಡಿರುವುದು   

ಮುಳಬಾಗಿಲು: ಅಪಾಯಕಾರಿ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೃತಕ ಬಣ್ಣದ ರಾಸಾಯನಿಕ ವಸ್ತುಗಳನ್ನು ಕಬಾಬ್, ಗೋಬಿ ಮಂಚೂರಿ ತಯಾರಿಕೆಯಲ್ಲಿ ಬಳಸಬಾರದು ಎಂದು ರಾಜ್ಯ ಸರ್ಕಾರ ಆದೇಶಿಸಿದ ಹೊರತಾಗಿಯೂ, ನಗರ ಮತ್ತು ತಾಲ್ಲೂಕಿನ ವಿವಿಧೆಡೆ ಕಬಾಬ್ ಮತ್ತು ಗೋಬಿ ಸೇರಿದಂತೆ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಕೃತಕ ಬಣ್ಣದ ರಾಸಾಯನಿಕ ಬಳಕೆ ಎಗ್ಗಿಲ್ಲದೆ ಮುಂದುವರಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಮುಳಬಾಗಿಲು ನಗರ, ನಂಗಲಿ, ತಾಯಲೂರು, ಬೈರಕೂರು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೃತಕ ಬಣ್ಣಗಳನ್ನು ಲೇಪಿಸಿದ ಕಬಾಬ್ ಹಾಗೂ ಗೋಬಿ ಮಂಚೂರಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಕೂಡಲೇ ಆರೋಗ್ಯ, ಸ್ಥಳೀಯ ಪಂಚಾಯಿತಿ ಹಾಗೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೆಲವು ನಾಗರಿಕರು ಒತ್ತಾಯಿಸಿದ್ದಾರೆ. 

ಕಬಾಬ್ ಹಾಗೂ ಗೋಬಿ ಮಂಚೂರಿ ಸೇರಿ ಇನ್ನಿತರ ಆಹಾರಗಳಲ್ಲಿ ಬಳಸುವ ಕೃತಕ ಬಣ್ಣಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಜೂನ್ 21ರಂದು ರಾಜ್ಯದಾದ್ಯಂತ ಎಲ್ಲ ಕಬಾಬ್, ಗೋಬಿ, ಮೀನು ಹಾಗೂ ಇನ್ನಿತರ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣದ ಬಳಕೆಯನ್ನು ನಿಷೇಧಿಸಿದೆ. ಒಂದು ವೇಳೆ ಕೃತಕ ಬಣ್ಣ ಬಳಸಿದ್ದಲ್ಲಿ, ₹10 ಲಕ್ಷದವರೆಗೆ ದಂಡ ಹಾಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. 

ADVERTISEMENT

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೃತಕ ರಾಸಾಯನಿಕ ಬಣ್ಣ ಬಳಸದಂತೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಬಣ್ಣಗಳ ಬಳಕೆಯನ್ನು ತಡೆಯಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆಗಳ ಮೂಲಕ ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಆರಂಭದಲ್ಲಿ ಅಧಿಕಾರಿಗಳು ಕೆಲವು ದಿನ ಕೃತಕ ಬಣ್ಣ ಬಳಸುವ ಸಸ್ಯಹಾರಿ, ಮಾಂಸಾಹಾರಿ ಮತ್ತು ಗೋಬಿ ಮಂಚೂರಿ ಮಾರುವ ತಳ್ಳುಗಾಡಿಗಳು ಮತ್ತು ಹೋಟೆಲ್‌ಗಳ ಮೇಲೆ ದಾಳಿಯನ್ನೂ ಮಾಡಿದ್ದರು. ಹೀಗಾಗಿ, ಆರಂಭದಲ್ಲಿ ಸುಮ್ಮನಿದ್ದ ವ್ಯಾಪಾರಿಗಳು ಇದೀಗ ರಾಜಾರೋಷವಾಗಿ ಕೃತಕ ಬಣ್ಣಗಳನ್ನು ಬಳಸುತ್ತಿದ್ದಾರೆ. ಆದರೆ, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.  ಬಣ್ಣಗಳಲ್ಲಿ ಬಳಕೆ ಮಾಡುವ ರೋಡಮೈನ್ ಬಿ ಎಂಬ ರಾಸಾಯನಿಕ ಅಂಶದಿಂದ ಬಣ್ಣಗಳು ಸೇವನೆ ಮಾಡಿದ ವ್ಯಕ್ತಿಗೆ ಕ್ಯಾನ್ಸರ್ ತರಿಸುವ ಗುಣ ಇದೆ.ಹೀಗಾಗಿ ಎಲ್ಲಿಯೂ ಕಡ್ಡಾಯವಾಗಿ ಬಳಸಲೇ ಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಲ್ಲಾ ಅಧಿಕಾರಿಗಳು ಜೂನ್ 21 ರಿಂದಲೇ ಬಣ್ಣಗಳ ಬಳಕೆಯವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದರೂ ಸಹ ಅಧಿಕಾರಿಗಳು ಈಚೆಗೆ ಬಣ್ಣಗಳ ಕುರಿತು ಗಮನ ನೀಡದೆ ಇದ್ದರೆ, ಮಾರುವವರು ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ.ಇದರಿಂದ ಬಣ್ಣಗಳ ಬಗ್ಗೆ ಕೆಲವರು ಗೊತ್ತಿದ್ದೂ ತಿನ್ನುತ್ತಿದ್ದರೆ, ಕೆಲವು ಅಮಾಯಕರು ಗೊತ್ತಿಲ್ಲದೆ ಬಣ್ಣಗಳ ಬಳಕೆಯ ಆಹಾರವನ್ನು ತಿಂದು ಅಪಾಯಕ್ಕೆ ಸಿಲುಕುತ್ತಿದ್ದಾರೆ.ಹೀಗಾಗಿ ಕೂಡಲೇ ಬಣ್ಣಗಳ ಬಳಕೆಯನ್ನು ನಿಷೇಧ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಕೆಲವು ವಿಚಾರವಂತರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.