ADVERTISEMENT

ಶ್ರೀನಿವಾಸಪುರ| ಅವರೇಕಾಯಿ ಮಾರಾಟ: ಹೋರಾಟಗಾರರು, ಕಾಂಗ್ರೆಸ್ಸಿಗರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:24 IST
Last Updated 9 ಜನವರಿ 2026, 7:24 IST
ಶ್ರೀನಿವಾಸಪುರದಲ್ಲಿ ಗುರುವಾರ ಹೋರಾಟಗಾರರು ಪ್ರತಿಭಟನೆ ನಡೆಸಿದರು
ಶ್ರೀನಿವಾಸಪುರದಲ್ಲಿ ಗುರುವಾರ ಹೋರಾಟಗಾರರು ಪ್ರತಿಭಟನೆ ನಡೆಸಿದರು   

ಶ್ರೀನಿವಾಸಪುರ: ಪಟ್ಟಣದ ಎಂ.ಜಿ. ರಸ್ತೆಯಲ್ಲಿ ನಡೆಯುತ್ತಿರುವ ಅವರೇಕಾಯಿ ವ್ಯಾಪಾರ ವಹಿವಾಟು ಸ್ಥಳಾಂತರ ವಿಚಾರವಾಗಿ ವಿವಿಧ ಸಂಘಟನೆಗಳ ಹೋರಾಟಗಾರರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ‌ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ರಸ್ತೆಯಲ್ಲಿ ಮಾರಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಎಪಿಎಂಸಿ ಮಾರುಕಟ್ಟೆಗೆ ವರ್ಗಾಯಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ವಾಗ್ವಾದ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಸ್ಥಳಾಂತರ ಮಾಡಬೇಕೆಂಬ ಬೇಡಿಕೆಯೊಂದಿಗೆ ಹೋರಾಟಗಾರರು ಗುರುವಾರ ಧರಣಿ ಕುಳಿತ್ತಿದ್ದರು. ಸ್ಥಳಕ್ಕೆ ಬಂದ ಪುರಸಭೆ ಅಧಿಕಾರಿಗಳು ಸ್ಥಳಾಂತರ ಮಾಡುವ ಭರವಸೆ ನೀಡಿದರು. ಪ್ರತಿಭಟನೆ ಕೈ ಬಿಟ್ಟು ವಾಪಸ್ಸು ತೆರಳುತ್ತಿದ್ದ ಹೋರಾಟಗಾರರನ್ನು ಉದ್ದೇಶಿಸಿ, ಮಾಜಿ ಪುರಸಭೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಬಿ.ಎಲ್.ಪ್ರಕಾಶ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ADVERTISEMENT

ಪೊಲೀಸರ ಸಮ್ಮುಖದಲ್ಲೇ ಹೋರಾಟಗಾರರನ್ನು ನಿಂದಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮ್ಮನ್ನು ನಿಂದಿಸಿರುವ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಖಚಿತ ಭರವಸೆ ನೀಡಬೇಕು ಎಂದು ಒತ್ತಾಯಿಸಿ ಹೋರಾಟಗಾರರು ಮತ್ತೆ ಪಟ್ಟು ಹಿಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ವಿ.ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರೊಂದಿಗೆ ಚರ್ಚಿಸಿದರು. ನಂತರ ಅವರೇಕಾಯಿ ಮಾರುಕಟ್ಟೆಯನ್ನು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದರು

ಅವರೇಕಾಯಿ ಮಾರಾಟ ಸ್ಥಳಾಂತರ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಹೋರಾಟಗಾರರು ಹಲವು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಯುವ ಘಟಕದ ಅಧ್ಯಕ್ಷ ಟಿ.ಸುಬ್ರಮಣಿ, ರಾಜ್ಯ ಮುಖಂಡರಾದ ರಾಮಾಂಜಿ, ಸುರೇಶ್ ನಾಯಕ್, ತಾಲ್ಲೂಕು ಅಧ್ಯಕ್ಷ ಆರ್.ವಿ.ಶ್ರೀನಾಥ್, ಪ್ರಧಾನ ಕಾರ್ಯದರ್ಶಿ ಮಹೇಶ್, ಜನ ಸ್ಪಂದನ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಎನ್.ಆರ್. ರಮೇಶ್, ಜಿಲ್ಲಾಧ್ಯಕ್ಷ ಚಿರಂಜೀವಿ, ರೈತ ಮುಖಂಡ ಚಲ್ದಿಗಾನಹಳ್ಳಿ ಪ್ರಭಾಕರ ಗೌಡ, ಬಚ್ಚೇಗೌಡ, ಸುಜಿತ್, ನವೀನ್, ರಾಜೇಶ್, ನರಸಿಂಹರಾಜು, ಧನಂಜಯ್, ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹೋರಾಟಗಾರರಿಗೆ ಕಾಂಗ್ರೆಸ್‌ ಮುಖಂಡರು ತಿರುಗೇಟು ನೀಡಿದರು

ಹೋರಾಟಗಾರರ ವಿರುದ್ಧ ತಿರುಗೇಟು

ಕಾಂಗ್ರೆಸ್ ಮುಖಂಡ ಬಿ.ಎಲ್.ಪ್ರಕಾಶ್ ಸುದ್ದಿಗೋಷ್ಠಿ ನಡೆಸಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದರು. 40 ವರ್ಷಗಳಿಂದ ರೈತರು ಪಟ್ಟಣದ ಎಂ.ಜಿ.ರಸ್ತೆಯಲ್ಲೇ ಅವರೇಕಾಯಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ. ಈಚೆಗೆ ಕೆಲವು ಮುಖಂಡರು ಹಾಗೂ ಸಂಘಟನೆಗಳು ಮಾರುಕಟ್ಟೆಗೆ ಬಂದು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡದಿದ್ದರೆ ಹೋರಾಟ ನಡೆಸುವುದಾಗಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಮಾರುಕಟ್ಟೆಯನ್ನು ಬೇರೆಡೆಗೆ ವರ್ಗಾಯಿಸಿದರೆ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ದೊಡ್ಡ ಸಮಸ್ಯೆಯಾಗಲಿದೆ. ದಯವಿಟ್ಟು ಸ್ಥಳಾಂತರ ಮಾಡಬಾರದು ಎಂದು ಕೆಲ ರೈತರು ಇದೇ ವೇಳೆ ಮನವಿ ಸಲ್ಲಿಸಿದರು. ಮುಖಂಡರಾದ ಅಕ್ಬರ್ ಶರೀಫ್ ಸರ್ದಾರ್ ಮುನಾವರ್ ಜಾವೀದ್ ಸಿ.ಆರ್.ಟಿ. ವೆಂಕಟರಾಮರೆಡ್ಡಿ ರಘು ಇದ್ದರು.