ADVERTISEMENT

ಕೋಲಾರ: ಜಲಸಂರಕ್ಷಣೆ ಜನಾಂದೋಲನವಾಗಬೇಕಿದೆ

ವರ್ಚುವಲ್‌ ವೇದಿಕೆಯಲ್ಲಿ ಜಲಾನಯನ ಯಾತ್ರೆಗೆ ಕೇಂದ್ರ ಸಚಿವ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 16:34 IST
Last Updated 7 ಫೆಬ್ರುವರಿ 2025, 16:34 IST
ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯಲ್ಲಿ ಜಲಾನಯನ ಯಾತ್ರೆ ಅಭಿಯಾನದ ವಾಹನಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿದರು
ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯಲ್ಲಿ ಜಲಾನಯನ ಯಾತ್ರೆ ಅಭಿಯಾನದ ವಾಹನಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿದರು   

ಮುಳಬಾಗಿಲು: ‘ಮಣ್ಣು ಮತ್ತು ನೀರಿನ ಕಾಳಜಿ ಬಹಳ ಅಗತ್ಯವಿದೆ. ಮುಂದಿನ ಪೀಳಿಗೆಗೆ ಸತ್ವಯುತ ಮಣ್ಣು ಹಾಗೂ ಪಾನಯೋಗ್ಯ ನೀರನ್ನು ಉಳಿಸುವುದು ಈಗಿನ ತಲೆಮಾರಿನ ಬಹುದೊಡ್ಡ ಜವಾಬ್ದಾರಿಯಾಗಿದೆ. ಜಲಸಂರಕ್ಷಣೆ ಸರ್ಕಾರಿ ಅಭಿಯಾನವಷ್ಟೇ ಅಲ್ಲದೆ ಪರಿಣಾಮಕಾರಿ ಜನಾಂದೋಲನವಾಗಬೇಕು’ ಎಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ತಿಳಿಸಿದರು.

ತಾಲ್ಲೂಕಿನ ಕುರುಡುಮಲೆ ಗ್ರಾಮದ ಗಣಪತಿ ದೇವಸ್ಥಾನ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಜಲಾನಯನಯಾತ್ರೆ ಅಭಿಯಾನವನ್ನು ವರ್ಚುವಲ್ ವೇದಿಕೆ ಮೂಲಕ ಅನಾವರಣ ಮಾಡಿ ಅವರು ಮಾತನಾಡಿದರು.

‘ಸುಸ್ಥಿರ ನೀರಿನ ನಿರ್ವಹಣೆಯತ್ತ ಮಹತ್ವದ ಹೆಜ್ಜೆಯಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಜಲಾನಯನ ಅಭಿವೃದ್ಧಿ ಘಟಕದಡಿ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ‘ಜಲಾನಯನ ಯಾತ್ರೆ’ಯನ್ನು ‌ಕೇಂದ್ರ ಸರ್ಕಾರ ಆರಂಭಿಸಿದೆ. ಈ ಅಭಿಯಾನವು ಮಾರ್ಚ್‌ವರೆಗೆ ಪರಿಕರ ಮತ್ತು ಡಿಜಿಟಲ್ ಪ್ರದರ್ಶನ ಹೊಂದಿರುವ ವಾಹನಗಳು ದೇಶದಾದ್ಯಂತ ಸಂಚರಿಸಲಿವೆ. ಸಂವಾದಾತ್ಮಕ ಕಾರ್ಯಾಗಾರಗಳು, ಸಮುದಾಯ ಚಟುವಟಿಕೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಈ ಅಭಿಯಾನದಡಿ ಜಲಾನಯನ ಸಂರಕ್ಷಣೆ, ಮಣ್ಣಿನ ಆರೋಗ್ಯವರ್ಧನೆ ಮತ್ತು ಮಳೆನೀರು ಸಂಗ್ರಹ ಸಂಬಂಧ ಅತ್ಯಾದುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತದೆ’ ಎಂದರು.

ADVERTISEMENT

‘ಈ ಜಲಾನಯನ ಯಾತ್ರೆ ಕೇವಲ ಜಾಗೃತಿ ಅಭಿಯಾನವಲ್ಲ; ಸಮುದಾಯಗಳು ಜಲಾನಯನ ಅಭಿವೃದ್ಧಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಜಲ ಭದ್ರತೆ ಹಾಗೂ ಕೃಷಿ ಸುಸ್ಥಿರತೆ ಪ್ರೇರೇಪಿಸುವ ಆಂದೋಲನವಾಗಿದೆ’ ಎಂದು ಹೇಳಿದರು.

ಶಾಸಕ ಕೊತ್ತೂರು ಜಿ.ಮಂಜುನಾಥ್, ‘ಎಲ್ಲಾ ರೈತರನ್ನು ಗೌರವಿಸುವುದು, ಅವರನ್ನು ಪ್ರೋತ್ಸಾಹಿಸುವುದು ಹಾಗೂ ನೀರು, ಮಣ್ಣು, ಗಾಳಿ, ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ರೈತರು ತಿಳಿದುಕೊಳ್ಳಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.‌ಅನಿಲ್‍ಕುಮಾರ್‌, ‘ಜಿಲ್ಲೆಯ ರೈತರು ಬುದ್ಧಿಶಾಲಿಗಳು. ಕೃಷಿಯಲ್ಲಿ ಯಾವುದೇ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸುವುದರಲ್ಲಿ ಮೊದಲಿಗರು. ಇಲ್ಲಿನ ರೈತರು ದೇಶಕ್ಕೆ ಮಾದರಿಯಾಗಿದ್ದಾರೆ’ ಎಂದು ನುಡಿದರು.

ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಮಹೇಶ್ ಬಿ.ಶಿರೂರ್, ‘ರಾಜ್ಯದಲ್ಲಿ 30 ದಿನ‌ ಆಂದೋಲನದ ವಾಹನ ಸಂಚರಿಸಲಿದೆ. ಈ ಯೋಜನೆಯಡಿ ಬರುವ ಎಲ್ಲಾ ರೈತರು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಜಂಟಿ ಕೃಷಿ ನಿರ್ದೇಶಕಿ ಎಂ.ಆರ್‌.ಸುಮಾ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಚಾರ ಮಾಡಲು ಎರಡು ವಾಹನಗಳಿಗೆ ಚಾಲನೆ ನೀಡಲಾಯಿತು. ಜಲಾನಯನ ಕಾರ್ಯಕ್ರಮದ ಮಾರ್ಗದರ್ಶಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲಾಯಿತು.

ಜಲಾನಯನ ಕಾರ್ಯಕ್ರಮದ ಬಗ್ಗೆ ಚಿತ್ರಕಲೆ, ರಂಗೋಲಿ ಸ್ಪರ್ಧೆ, ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸ್ವಸಹಾಯ ಸಂಘಗಳ ಮೇಳ ಆಯೋಜಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ನಾಗಮಣಿ, ಉಪಾಧ್ಯಕ್ಷ ರಮೇಶ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹಮ್ಮದ್ ಪರವೇಜ ಬಂಥನಾಳ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ರಾಜಣ್ಣ, ಸೀಸಂದ್ರ ಗೋಪಾಲಗೌಡ, ನಂದಿನಿ ಪ್ರವೀಣ್, ಕೃಷಿ ಇಲಾಖೆ ಉಪನಿರ್ದೇಶಕಿ ಭವ್ಯರಾಣಿ ಹಾಗೂ ರೈತರು ಇದ್ದರು.

ಕಾರ್ಯಕ್ರಮದಲ್ಲಿ ಜಲಾನಯನ ಕಾರ್ಯಕ್ರಮದ ಮಾರ್ಗದರ್ಶಕರಿಗೆ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.