ADVERTISEMENT

ಆಯುರ್ವೇದ: ಅಡ್ಡ ಪರಿಣಾಮ ಬೀರಲ್ಲ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 14:37 IST
Last Updated 11 ಸೆಪ್ಟೆಂಬರ್ 2019, 14:37 IST
ಕೋಲಾರದಲ್ಲಿ ಆಯುಷ್ ಇಲಾಖೆಯಿಂದ ಬುಧವಾರ ಉಚಿತ ಹೋಮಿಯೋಪತಿ ಆರೋಗ್ಯ ಶಿಬಿರ ನಡೆಯಿತು.
ಕೋಲಾರದಲ್ಲಿ ಆಯುಷ್ ಇಲಾಖೆಯಿಂದ ಬುಧವಾರ ಉಚಿತ ಹೋಮಿಯೋಪತಿ ಆರೋಗ್ಯ ಶಿಬಿರ ನಡೆಯಿತು.   

ಕೋಲಾರ: ‘ಸಾರ್ವಜನಿಕರು ಕಾಯಿಲೆಗಳಿಗೆ ಆಯುರ್ವೇದ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಆಯುಷ್ ವೈದ್ಯ ಡಾ.ಬಸವರಾಜ್ ತಿಳಿಸಿದರು.

ಆಯುಷ್ ಇಲಾಖೆಯಿಂದ ಇಲ್ಲಿನ ಹಾರೋಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಹೋಮಿಯೋಪತಿ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಯಾವುದೇ ರೋಗದ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು, ಯಾವ ಕಾಯಿಲೆಯನ್ನು ಶಾಶ್ವತವಾಗಿ ನಿಯಂತ್ರಿಸುವ ಚಿಕಿತ್ಸೆ ಎಲ್ಲೂ ಸಿಗುವುದಿಲ್ಲ, ಹೋಮಿಯೋಪತಿ ಚಿಕಿತ್ಸೆಯಿಂದ ಸುಲಭವಾಗಿ ಕಾಯಿಲೆಯನ್ನು ತಡೆಗಟ್ಟಬಹುದು’ ಎಂದು ಹೇಳಿದರು.

‘ದೇಶಿ ಪದ್ದತಿಯ ಚಿಕಿತ್ಸೆಯನ್ನು ನಂಬಬೇಕು, ಕಾಯಿಲೆ ಕಾಣಿಸಿಕೊಂಡಾಗ ಚಿಕಿತ್ಸೆ ಪಡೆದುಕೊಂಡು ಸದ್ಯಕ್ಕೆ ಸುಮ್ಮನಾದರೆ ಸಂಪೂರ್ಣವಾಗಿ ವಾಸಿಯಾಗುವುದಿಲ್ಲ, ನಿರಂತರ ಆಯುರ್ವೇದ ಚಿಕಿತ್ಸೆ ಪಡೆಯುವುದು’ ಸೂಕ್ತ ಎಂದು ತಿಳಿಸಿದರು.

ADVERTISEMENT

‘ಪರಿಸರ ಮಾಲಿನ್ಯ ಮತ್ತು ಬದಲಾದ ಜೀವನ ಶೈಲಿಯಿಂದ ದೀರ್ಘಕಾಲಿಕ ಕಾಯಿಲೆಗಳು ಹೆಚ್ಚುತ್ತಿವೆ. ಇವುಗಳನ್ನು ಆಯುರ್ವೇದ ವೈದ್ಯ ಪದ್ಧತಿಯಿಂದ ಗುಣಮುಖಪಡಿಸಿಕೊಳ್ಳಬಹುದು. ಎಲ್ಲರೂ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜನ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಕಾಯಿಲೆ ತೀವ್ರಗೊಳ್ಳುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ವಾತಾವರಣಕ್ಕೆ ಅನುಗುಣವಾಗಿ ಆಹಾರ ಸೇವಿಸಿ. ಆಯುರ್ವೇದ ಇಲಾಖೆಯಿಂದ ಸಂಧಿವಾತ, ಚರ್ಮರೋಗ, ಹೊಟ್ಟೆನೋವು, ಆಸ್ತಮಾ, ನೆಗಡಿ, ಕೆಮ್ಮು, ಸ್ತ್ರೀರೋಗ ಸೇರಿದಂತೆ ನಾನಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಆದ್ದರಿಂದ ನಿಮ್ಮ ಸಮೀಪದ ಆಯುರ್ವೇದ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ’ ಎಂದು ಹೇಳಿದರು.

ಸುಮಾರು ನೂರಾರು ಮಂದಿ ಶಿಬಿರದಲ್ಲಿ ಆರೋಗ್ಯ ತಾಪಾಸಣೆ ಮಾಡಿಸಿಕೊಂಡರು.

ಕ್ರೀಡಾ ತರಬೇತುದಾರ ಜಗನ್ನಾಥ್, ಮುಖಂಡರಾದ ಸತ್ಯಣ್ಣ, ಶ್ರೀನಾಥ್, ಪ್ರಕಾಶ್, ಬಾಬು, ಬಾಲಾಜಿ, ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.