ಬಂಗಾರಪೇಟೆ: ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಣೆ ಮಾಡಲು ತಾಲ್ಲೂಕಿನ ಜನರು ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ. ವಸ್ತುಗಳ ಬೆಲೆ ಏರಿಕೆ ನಡುವೆಯೂ ಗೃಹಿಣಿಯರು ಮತ್ತು ಇತರ ನಾಗರಿಕರು ಹಸಿರು ಪಟಾಕಿ, ದೀಪಗಳು, ಹಣ್ಣು, ಸಿಹಿ ತಿನಿಸುಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು.
ಹೂವು, ಹಣ್ಣಿನ ಬೆಲೆ ದುಬಾರಿ: ದಸರಾ ಹಬ್ಬದ ನಂತರ ಕೆಲವು ದಿನಗಳ ಕಾಲ ಹೂವಿನ ಬೆಲೆ ಇಳಿಮುಖವಾಗಿತ್ತು. ಆದರೆ, ದೀಪಾವಳಿ ಕಾರಣಕ್ಕೆ ಮತ್ತೆ ಹೂವುಗಳ ಬೆಲೆ ಏರಿಕೆಯಾಗಿದ್ದು, ಸೇವಂತಿ ಹೂವು ಕೆ.ಜಿಗೆ ₹200–₹250, ಗುಲಾಬಿ ₹200, ಮಲ್ಲಿಗೆ ₹600, ಸುಗಂಧರಾಜ ₹200, ಚೆಂಡುಹೂವು ₹50ಕ್ಕೆ ಮಾರಾಟವಾದವು.
ಒಂದು ಜೋಡಿ ಬಾಳೆ ದಿಂಡಿಗೆ ಕೆಲವೆಡೆ ₹20 ಇದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ₹50ಕ್ಕೆ ಮಾರಾಟವಾಗುತ್ತಿತ್ತು. ಹಣ್ಣುಗಳ ಬೆಲೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿತ್ತು. ಸೇಬು ಕೆ.ಜಿಗೆ ₹160–₹200ರವರೆಗೆ ಮಾರಾಟವಾಗುತ್ತಿತ್ತು. ಬಾಳೆಹಣ್ಣು ₹80–₹100, ಮೂಸಂಬಿ ₹80–90, ದಾಳಿಂಬೆ ದರವು ₹160–200ಕ್ಕೆ ತಲುಪಿತ್ತು.
ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿಭಿನ್ನ ರೀತಿಯ ಅಲಂಕಾರಿಕ ದೀಪಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದಿದ್ದರು. ಸಣ್ಣ ಗಾತ್ರದ ಮಣ್ಣಿನ ದೀಪ ₹24 ಗಳಿದ್ದರೆ, ಗಾತ್ರಕ್ಕೆ ಅನುಗುಣವಾಗಿ ಒಂದು ಮಣ್ಣಿನ ದೀಪವು ಗರಿಷ್ಠ ₹50ವರೆಗೆ ಮಾರಾಟವಾಗುತ್ತಿದ್ದವು. ಅಷ್ಟೇ ಅಲ್ಲದೆ, ಬಟ್ಟೆ ಅಂಗಡಿಗಳಲ್ಲೂ ಜನಜಂಗುಳಿ ಕಂಡುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.