ADVERTISEMENT

ಮಾಲೂರು: ರೈಲು ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 12:51 IST
Last Updated 9 ಮಾರ್ಚ್ 2022, 12:51 IST
ಶಹಬಾಜ್‌ ಅಹಮ್ಮದ್‌ ಷರೀಫ್‌
ಶಹಬಾಜ್‌ ಅಹಮ್ಮದ್‌ ಷರೀಫ್‌   

ಮಾಲೂರು: ತಾಲ್ಲೂಕಿನ ಟೇಕಲ್‌ ರೈಲು ನಿಲ್ದಾಣದಲ್ಲಿ ಬುಧವಾರ ಕೊದಲೆಳೆ ಅಂತರದಲ್ಲಿ ದೊಡ್ಡ ದುರಂತ ತಪ್ಪಿದ್ದು, ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ಕಡೆಗೆ ಹೋಗಬೇಕಿದ್ದ ಮಾರಿಕುಪ್ಪಂ ಸ್ವರ್ಣ ಪ್ಯಾಸೆಂಜರ್‌ ರೈಲು, ಕ್ರಾಸಿಂಗ್‌ ಕಾರಣಕ್ಕೆ ಟೇಕಲ್‌ ನಿಲ್ದಾಣದ 4ನೇ ಪ್ಲಾಟ್‌ಫಾರಂನಲ್ಲಿ ತುಂಬಾ ಹೊತ್ತಿನಿಂದ ನಿಂತಿತ್ತು. ಅದೇ ವೇಳೆಗೆ ಬಂಗಾರಪೇಟೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಪುಷ್ಪುಲ್‌ ರೈಲು ಒಂದನೇ ಪ್ಲಾಟ್‌ಫಾರಂಗೆ ಬಂದಿತು. ಈ ಎರಡೂ ರೈಲುಗಳಲ್ಲಿನ ನೂರಾರು ಪ್ರಯಾಣಿಕರು ಕೆಳಗಿಳಿದು ಪರಸ್ಪರ ಬೇರೆ ರೈಲಿಗೆ ಹತ್ತಲು ಹಳಿ ದಾಟಲು ಮುಂದಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಗ ಬೆಂಗಳೂರಿನಿಂದ ಚೆನ್ನೈ ಕಡೆಗೆ ಹೋಗುತ್ತಿದ್ದ ಶತಾಬ್ಧಿ ಎಕ್ಸ್‌ಪ್ರೆಸ್‌ ರೈಲು ತುಂಬಾ ವೇಗದಲ್ಲಿ ನಿಲ್ದಾಣದ 2ನೇ ಪ್ಲಾಟ್‌ಫಾರಂನ ಹಳಿಗೆ ಬರುತ್ತಿದ್ದಂತೆ ಗಾಬರಿಯಾದ ಪ್ರಯಾಣಿಕರು ಪಕ್ಕದ ಹಳಿಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ ಪೊಲೀಸರು ಹೇಳಿದ್ದಾರೆ.

ADVERTISEMENT

ಆದರೆ, ಬಂಗಾರಪೇಟೆಯ ಶಹಬಾಜ್‌ ಅಹಮ್ಮದ್‌ ಷರೀಫ್‌ (25) ಎಂಬುವರು ಶತಾಬ್ಧಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಜತೆಗೆ ಮಹಿಳಾ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ಶತಾಬ್ಧಿ ಎಕ್ಸ್‌ಪ್ರೆಸ್‌ ರೈಲು ಬರುವ ಬಗ್ಗೆ ನಿಲ್ದಾಣದ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಯಾವುದೇ ಮುನ್ಸೂಚನೆ ನೀಡದ್ದಿದ್ದುದೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದರು. ಶಹಬಾಜ್‌, ಬೆಂಗಳೂರಿನ ಕೆ.ಆರ್‌.ಪುರಂ ಕಾಲ್‌ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.