ADVERTISEMENT

ಬಂಗಾರಪೇಟೆ: ನಿರ್ವಹಣೆ ಕೊರತೆಯಿಂದ ತುಕ್ಕು ಹಿಡಿಯುತ್ತಿವೆ ನೀರಿನ ಘಟಕಗಳು

ಕುಡಿವ ನೀರಿಗಾಗಿ ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:56 IST
Last Updated 18 ಫೆಬ್ರುವರಿ 2026, 6:56 IST
ಬಂಗಾರಪೇಟೆ ನಗರದ ಅಮರಾವತಿ ಬಡಾವಣೆಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ
ಬಂಗಾರಪೇಟೆ ನಗರದ ಅಮರಾವತಿ ಬಡಾವಣೆಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ   

ಬಂಗಾರಪೇಟೆ: ಸೂಕ್ತ ನಿರ್ವಹಣೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕಗಳು ತುಕ್ಕುಹಿಡಿಯುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂಬ ಉದ್ದೇಶದಿಂದ ಸ್ಥಾಪಿಸಲಾಗಿರುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಬೆರಳೆಣಿಕೆಯಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕಾಲಕಾಲಕ್ಕೆ ಫಿಲ್ಟರ್‌ ಬದಲಾವಣೆ ಮತ್ತು ಮೋಟಾರ್‌ ಸರ್ವಿಸ್ ನಡೆಯದ ಕಾರಣ ಯಂತ್ರಗಳು ಸಂಪೂರ್ಣವಾಗಿ ಹಾಳಾಗುತ್ತಿವೆ. ಇದರಿಂದ ಘಟಕದ ಒಳಗಿನ ಬೆಲೆಬಾಳುವ ಉಪಕರಣಗಳು ತುಕ್ಕು ಹಿಡಿಯುತ್ತಿದ್ದು, ಸಾರ್ವಜನಿಕರ ತೆರಿಗೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ನೂರಾರು ಕೋಟಿ ಖರ್ಚು ಮಾಡಿ ನಗರದಲ್ಲಿ ಒಟ್ಟು 30 ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಅದರಲ್ಲಿ 10 ಘಟಕಗಳು ಕೆಟ್ಟು ಹೋಗಿವೆ.  ನಗರದ ರಹೀಂ ಕಾಂಪೌಂಡ್, ಅಮರಾವತಿ ಮತ್ತು ಮುನಿಯಮ್ಮ ಬಡಾವಣೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ, ತಾಲ್ಲೂಕು ಕಚೇರಿ ಬಳಿ, ಎಪಿಎಂಸಿ ಮಾರುಕಟ್ಟೆ ಬಳಿ ಸೇರಿದಂತೆ ಮುಂತಾದ ಕಡೆ ಸ್ಥಗಿತಗೊಂಡಿದೆ. ಇದರಿಂದ ಸುತ್ತ ಮುತ್ತಲಿನ ಬಡಾವಣೆ ಜನರು ದೂರದ ನೀರಿನ ಘಟಕವನ್ನು ಅವಲಂಬಿಸುವಂತಾಗಿದೆ. 

ADVERTISEMENT

ನೀರಿನ ಘಟಕಗಳು ಕೆಟ್ಟಿರುವುದರಿಂದ ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ನಾವು ಕಾರ್ಡ್ ರೀಚಾರ್ಜ್ ಮಾಡಿಸಿದ್ದೇವೆ. ಆದರೆ, ಮಿಷನ್ ಕೆಲಸ ಮಾಡುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಖಾಸಗಿ ಮಾರಾಟಗಾರರಿಂದ ಹೆಚ್ಚಿನ ಹಣ ಕೊಟ್ಟು ನೀರು ಖರೀದಿಸುವಂತಾಗಿದೆ ಎಂಬುದು ನಿವಾಸಿಗಳ ಅಳಲಾಗಿದೆ.

ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. 

ಮುನಿಯಮ್ಮ ಬಡಾವಣೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬಾಗಿಲು ಹಾಕಿರುವುದು
ಖಾದರ್ ಲೇಔಟ್‌ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿ
ನಗರದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ದುರಸ್ತಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಸತ್ಯ ನಾರಾಯಣ ಮುಖ್ಯಾಧಿಕಾರಿ ಪುರಸಭೆ ಬಂಗಾರಪೇಟೆ
ಘಟಕಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗಿದೆ. ಆದರೆ ಸಂಸ್ಥೆಗಳು ಬಿಲ್ ಪಡೆಯುವಲ್ಲಿ ತೋರುವ ಉತ್ಸಾಹವನ್ನು ಯಂತ್ರಗಳ ನಿರ್ವಹಣೆಯಲ್ಲಿ ತೋರುತ್ತಿಲ್ಲ.
ತೊರಲಕ್ಕಿ ಮಂಜುನಾಥ ನಿವಾಸಿ ಅಮರಾವತಿ ಬಡಾವಣೆ
ಲಕ್ಷಾಂತರ ಮೌಲ್ಯದ ಫಿಲ್ಟರ್‌ ಮತ್ತು ಮೋಟಾರ್‌ಗಳು ನಿರ್ವಹಣೆಯಿಲ್ಲದೆ ಗುಜರಿ ಪಾಲಾಗುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.
ಶಿವಕುಮಾರ್ ಮುನಿಯಮ್ಮ ಬಡಾವಣೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.