ADVERTISEMENT

ಬಂಗಾರಪೇಟೆ: ಫೆ.12ರ ಮುಷ್ಕರಕ್ಕೆ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:06 IST
Last Updated 10 ಫೆಬ್ರುವರಿ 2026, 5:06 IST
ಬಂಗಾರಪೇಟೆ ನಗರದ ಸಿಐಟಿಯು ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ
ಬಂಗಾರಪೇಟೆ ನಗರದ ಸಿಐಟಿಯು ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ   

ಬಂಗಾರಪೇಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಿ ಇದೇ 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಭಾನುವಾರ ಪೂರ್ವಭಾವಿ ಸಭೆ ಆಯೋಜಿಸಲಾಯಿತು. 

ಸಭೆ ಉದ್ದೇಶಿಸಿ ಮಾತನಾಡಿದ ಜೆಸಿಟಿಯು ಮತ್ತು ಸಂಯುಕ್ತ ಹೋರಾಟ ಸಮಿತಿಯು, ಇದೇ 12ರಂದು ನಡೆಯಲಿರುವ ಮುಷ್ಕರದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಮುಷ್ಕರವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿತು. ಈ ಸಭೆಯಲ್ಲಿ ಮುಷ್ಕರದ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು. 

ಸಿಐಟಿಯು ಮುಖಂಡ ಪಿ. ಶ್ರೀನಿವಾಸ್ ಮಾತನಾಡಿ, ‘ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ವಿಬಿ ಜಿ ರಾಮ್ ಜಿ ಕಾಯ್ದೆಗಳು ಶ್ರಮಿಕ ವರ್ಗದ ಹಕ್ಕುಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಿವೆ. ಇದು ಬಂಡವಾಳಶಾಹಿಗಳ ಪರವಾದ ನೀತಿಯಾಗಿದ್ದು, ರೈತ ಮತ್ತು ಕಾರ್ಮಿಕರ ವಿರೋಧಿ ನೀತಿಗಳು ಎಂದು ಟೀಕಿಸಿದರು. 

ADVERTISEMENT

ಎಐಸಿಸಿಟಿಯು ಮುಖಂಡ ಆರ್. ಪ್ರಭಾಕರನ್ ಮಾತನಾಡಿ, ಹೊಸ ಕಾರ್ಮಿಕ ಸಂಹಿತೆಗಳು ಅಸಂಘಟಿತ ವಲಯದ, ಮುಖ್ಯವಾಗಿ ಕಟ್ಟಡ ಕಾರ್ಮಿಕರ ಜೀವನೋಪಾಯದ ಮೇಲೆ ಮಾರಕ ಪರಿಣಾಮ ಬೀರಲಿವೆ. ಕಾರ್ಮಿಕರ ಸಾಮಾಜಿಕ ಭದ್ರತೆಗೆ ಧಕ್ಕೆ ತರುವ ಈ ನೀತಿಗಳ ವಿರುದ್ಧ ಒಗ್ಗಟ್ಟಿನ ಹೋರಾಟ ಅನಿವಾರ್ಯ ಎಂದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಬಿ.ಎಲ್. ಕೇಶವರಾವ್, ಕೆಪಿಆರ್‌ಎಸ್ ಜಿ.ಡಿ. ರಂಗನಾಥ್, ಸಿಪಿಐಎಂ ಸದಸ್ಯ ಜಿ. ಗಣೇಶನ್, ಸಿ.ಆರ್. ಮೂರ್ತಿ, ಜಿ. ವೆಂಕಟೇಶಪ್ಪ ಸೇರಿದಂತೆ ಡಿಎಸ್ಎಸ್ ಮತ್ತು ಕಟ್ಟಡ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.