
ಬಂಗಾರಪೇಟೆ: ‘ಸಾರ್ವಜನಿಕರು ನಕ್ಷೆ ಅನುಮೋದನೆಗಾಗಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವುದು. ಆನ್‌ಲೈನ್ ತಂತ್ರಜ್ಞಾನದ ಮೂಲಕ ಪ್ರಕ್ರಿಯೆ ಸರಳಗೊಳಿಸುವುದು ಹಾಗೂ ಅರ್ಹ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವುದು ನಮ್ಮ ಗುರುಯಾಗಿದೆ’ ಎಂದು ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಮುನಿರಾಜು ತಿಳಿಸಿದರು.
ನಗರದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸ್ಥಳೀಯ ಯೋಜನಾ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕನ್ನು ಅಭಿವೃದ್ಧಿ ಪಡಿಸಬೇಕಾದರೆ ಮೊದಲು ಗ್ರೀನ್ ಬೆಲ್ಟ್, ಯೆಲ್ಲೋ ಬೆಲ್ಟ್, ಇಂಡಸ್ಟ್ರಿಯಲ್ ಬೆಲ್ಟ್, ಒಪನ್ ಸ್ಪೇಸ್ ಹೀಗೆ ಹಲವು ವಲಯಗಳನ್ನು ಗೊತ್ತುಪಡಿಸಿಬೇಕಿದೆ. ಈ ನಿಟ್ಟಿನಲ್ಲಿ ಸಿಡಿಪಿ ಮತ್ತು ಒಡಿಪಿ ನಕ್ಷೆ ತಯಾರಿಸುವ ಅವಶ್ಯಕತೆ ಸಹ ಇದೆ. ಅದಕ್ಕಾಗಿ ನುರಿತ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ನಗರ ಪ್ರದೇಶವು ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯು ಕೇವಲ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗದೆ, ವೈಜ್ಞಾನಿಕವಾದ ‘ಮಾಸ್ಟರ್ ಪ್ಲಾನ್’ ಅಡಿಯಲ್ಲಿ ನಡೆಯಬೇಕು. ರಸ್ತೆ, ಚರಂಡಿ ವ್ಯವಸ್ಥೆ ಮತ್ತು ಉದ್ಯಾನವನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ಅನಧಿಕೃತ ಲೇಔಟ್ ನಿರ್ಮಾಣ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕಂದಾಯ ಮತ್ತು ನಗರಸಭೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು ಅನಿವಾರ್ಯ. ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನು ಮರೆಯಬಾರದು. ಕೆರೆಗಳ ಸಂರಕ್ಷಣೆ, ರಾಜಕಾಲುವೆ ಒತ್ತುವರಿ ತೆರವು ಮತ್ತು ಹಸಿರು ವಲಯಗಳ ರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಬಂಗಾರಪೇಟೆ ಪಟ್ಟಣದ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ. ಅದಕ್ಕಾಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ನಗರಸಭೆಗೆ 50 ಸಾವಿರ ಜನಸಂಖ್ಯೆ ದಾಟಬೇಕಿದ್ದ ಕಾರಣ ನಗರಕ್ಕೆ ಹೊಂದಿಕೊಂಡಿರುವ ದೇಶಿಹಳ್ಳಿ, ಬೆಂಗನೂರು, ಐನೋರಹೊಸಹಳ್ಳಿ, ಕಾರಹಳ್ಳಿಯ ಕೆಲವು ಸರ್ವೆ ನಂಬರ್‌ಗಳನ್ನು ಮಾತ್ರ ಸೇರ್ಪಡೆಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಪಂಚಾಯಿತಿ ಕೇಂದ್ರ ಸ್ಥಾನಗಳ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಂಡಿಲ್ಲ. ಗೆಜೆಟ್‌ನಲ್ಲಿ ಎಲ್ಲವನ್ನೂ ನಮೂದು ಮಾಡಲಾಗಿದೆ. ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.
ಸಭೆಯಲ್ಲಿ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಂಜೇಶ್ ಕುಮಾರ್, ಯೋಜನಾಧಿಕಾರಿ ಕಲ್ಲೇಶ್, ಸದಸ್ಯರಾದ ಕೆ.ಜಿ.ನಂಜಪ್ಪ, ವೆಂಕಟರಾಮಣ್ಣ, ನಾಗವೇಣಿ, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಭಾಗವಹಿಸಿದ್ದರು.
ಬಂಗಾರಪೇಟೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು ಈಗ ಯೋಜನಾ ಪ್ರಾಧಿಕಾರವನ್ನು ನಗರಾಭಿವೃದ್ಧಿ ಪ್ರಾಧಿಕಾರ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದುಆರ್.ಮುನಿರಾಜು ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.