ಬಂಗಾರಪೇಟೆ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಯು ತಾಲ್ಲೂಕಿನಲ್ಲಿ ಕಳಪೆಯಿಂದ ಕೂಡಿದೆ. ಅಷ್ಟೇ ಅಲ್ಲದೆ, ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಯದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ನಿಯಮದ ಪ್ರಕಾರ 40ಕ್ಕಿಂತ ಹೆಚ್ಚು ಮನೆಗಳಿರುವ ಗ್ರಾಮಗಳಲ್ಲಿ ಪ್ರತಿಯೊಂದು ಮನೆಗೆ ನಲ್ಲಿ ಅಳವಡಿಸಿ, ನೀರು ಸರಬರಾಜು ಮಾಡಬೇಕು. ತಾಲ್ಲೂಕಿನಲ್ಲಿ 260 ಹಳ್ಳಿಗಳು ಜಲಜೀವನ್ ಮಿಷನ್ ಯೋಜನೆಗೆ ಒಳಪಟ್ಟಿವೆ. ಅದರಲ್ಲಿ 170 ಹಳ್ಳಿಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಆನ್‌ಲೈನ್ ಹರಾಜು ಮೂಲಕ ಗುತ್ತಿಗೆದಾರರು ಕಾಮಗಾರಿ ಗುತ್ತಿಗೆಯನ್ನು ಪಡೆಯುತ್ತಾರೆ. ಒಂದೊಂದು ಗ್ರಾಮದ ಕಾಮಗಾರಿ ಒಬ್ಬೊಬ್ಬ ಗುತ್ತಿಗೆದಾರರು ಮಾಡುತ್ತಾರೆ. ಕೆಲವೆಡೆ ಮೂರ್ನಾಲ್ಕು ಗ್ರಾಮದ ಕಾಮಗಾರಿ ಕೂಡ ಒಬ್ಬರೇ ಗುತ್ತಿಗೆದಾರ ನಿರ್ವಹಿಸುತ್ತಿದ್ದಾನೆ.
ಆದರೆ, ಬಹುತೇಕ ಗ್ರಾಮಗಳಲ್ಲಿ ಈ ಯೋಜನೆಯ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಕೆಲವೆಡೆ ಬೇಕಾಬಿಟ್ಟಿಯಾಗಿ ಪೈಪ್‌ಲೈನ್ ಅಳವಡಿಸಲಾಗಿದೆ. ಗುಣಮಟ್ಟದ ಪೈಪ್ ಹಾಗೂ ಸಾಮಗ್ರಿಯ ಗುಣಮಟ್ಟ ಕಳಪೆಯಾಗಿದೆ. ಪೈಪ್ ಹಾಗೂ ನಲ್ಲಿ ಅಳವಡಿಸಲು ಹಾಕಲಾದ ಸಿಮೆಂಟ್ ಕಂಬ ಕೆಲವೇ ದಿನಗಳಲ್ಲಿ ಹಾಳಾಗುತ್ತಿದೆ. ಕೆಲವೆಡೆ ಹಾಕಿದ ಸಿಮೆಂಟ್ ಕಂಬವು ನಲ್ಲಿಯಲ್ಲಿ ನೀರು ಬರುವ ಮುನ್ನವೇ ಮುರಿದುಬಿದ್ದಿದೆ.
ಟೆಂಡರ್ ನಿಬಂಧನೆಗಳಲ್ಲಿ ನಿಗದಿಪಡಿಸಿದ ಅವಧಿ ಮುಗಿದರೂ ಸಹ ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ. ಪೈಪ್‌ಲೈನ್ ಮತ್ತು ನಲ್ಲಿಗಳು ಕನಿಷ್ಠ 35 ವರ್ಷ ಬಾಳಿಕೆ ಬರಬೇಕು ಎಂಬ ನಿಯಮವಿದೆ. ಆದರೆ, ಅಳವಡಿಸಲಾದ ಪೈಪ್‌ಲೈನ್ ಮತ್ತು ಕಾಮಗಾರಿಯು ಕನಿಷ್ಠ 2–3 ವರ್ಷ ಕೂಡ ಬಾಳಿಕೆ ಬರುವುದಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಜಲ ಜೀವನ್ ಮಿಷನ್ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಯುತ್ತಿದ್ದು ಕಳಪೆ ಕಾಮಗಾರಿ ಬಗ್ಗೆ ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಸೂರ್ಯಪ್ರಸಾದ್, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಂಗಾರಪೇಟೆ
ತಾಲ್ಲೂಕಿನ ಗಡಿಭಾಗದ ಗ್ರಾಮಗಳಲ್ಲಿ ತರಾತುರಿಯಲ್ಲಿ ಪೈಪ್‌ಲೈನ್ ಕಾಮಗಾರಿ ಮಾಡಲಾಗಿದೆ. 70ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಒಂದು ಕಡೆಯೂ ಗುಣಮಟ್ಟದ ಪೈಪ್ ಹಾಗೂ ನಲ್ಲಿ ಹಾಕಿಲ್ಲ. ಸಿಮೆಂಟ್ ಕಂಬ ಕಳಪೆಯಿಂದ ಕೂಡಿದ್ದು, ಹಾಕಿದ ವಾರದಲ್ಲೇ ಕೆಲವೆಡೆ ಪುಡಿಪುಡಿಯಾಗಿವೆ. ಕಬ್ಬಿಣದ ಪೈಪ್ ಕೂಡ ತೀರಾ ಕಳಪೆಯಾಗಿದೆ. ಒಂದು ವರ್ಷ ಕೂಡ ಬಾಳಿಕೆ ಬರುವಂತೆ ಕಾಣುತ್ತಿಲ್ಲ. ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲಾಗಿದೆ ಎನ್ನುತ್ತಾರೆ ಅಶೋಕ್ ರಾಯಣ್ಣ.
ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೈಗೊಂಡ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ, ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಹಳ್ಳ ಹಿಡಿದಿದೆ. ಕಾಮಗಾರಿ ಕಳಪೆ ಆಗಿರುವುದರಿಂದ ಮನೆಗಳಿಗೆ ನೀರು ತಲುಪುತ್ತದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ರಾಯಣ್ಣ ಆರೋಪಿಸುತ್ತಾರೆ.
ಪೈಪ್‌ಗಳು ಒಡೆಯುವ ಸಾಧ್ಯತೆ
ಮೂರು ಅಡಿ ಆಳದ ಕಾಲುವೆ ತೆಗೆದು, ಪೈಪ್‌ಲೈನ್ ಹಾಕಬೇಕು. ಕೇವಲ 1–1.5 ಅಡಿ ಆಳ ಮಣ್ಣು ತೆಗೆದು ಪೈಪ್ ಹಾಕಲಾಗುತ್ತಿದೆ. ರಸ್ತೆ ಪಕ್ಕದಲ್ಲಿಯೇ ಪೈಪ್‌ಲೈನ್ ಮಾಡಲಾಗುತ್ತಿದ್ದು, ಟ್ಯಾಂಕರ್, ಟಿಪ್ಪರ್ ಮೊದಲಾದ ದೊಡ್ಡ ವಾಹನಗಳು ರಸ್ತೆಯಲ್ಲಿ ಚಲಿಸಿದರೆ, ಪೈಪ್‌ಲೈನ್‌ಗೆ ಹಾನಿ ಆಗುವ ಸಾಧ್ಯತೆ ಇದೆ
- ಮಂಜುನಾಥ ಎನ್. ಗಾಜಗ ಗ್ರಾಮಸ್ಥ
ಹಾಳಾದ ರಸ್ತೆಗಳು
ತಾಲ್ಲೂಕಿನಾದ್ಯಂತ ಕಾಮಗಾರಿ ಮಾಡುವ ನೆಪದಲ್ಲಿ ಸುಂದರವಾಗಿದ್ದ ರಸ್ತೆಯನ್ನು ಬೇಕಾಬಿಟ್ಟಿಯಾಗಿ ಅಗೆಯಲಾಗಿದೆ. ಪೈಪ್‌ಗಳನ್ನು ಹಾಕಿದ್ದರಿಂದ ರಸ್ತೆಯು ತಗ್ಗು ಮತ್ತು ದಿಣ್ಣೆಯಾಗಿ ಮಾರ್ಪಟ್ಟಿದೆ. ರಸ್ತೆಯಲ್ಲಿ ವಾಹನ ಸಂಚಾರ ಮಾತ್ರವಲ್ಲದೆ, ಜನರು ನಡೆದು ಹೋಗುವುದು ದುಸ್ತರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ದ್ವಿಚಕ್ರ ಸವಾರರು ಸಂಚರಿಸುವುದು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
- ರಾಮಚಂದ್ರ, ಗುವಲಹಳ್ಳಿ
ಗ್ರಾಮೀಣ ಜನರಿಗೆ ಹೊರೆ
ಊರಾಚೆ ಇರುವ ಮನೆಗಳಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸುತ್ತಿಲ್ಲ. ಗುತ್ತಿಗೆದಾರರ ಸಿಬ್ಬಂದಿಯನ್ನು ವಿಚಾರಿಸಿದರೆ, ಗ್ರಾಮ ಪಂಚಾಯಿತಿಗೆ ಅರ್ಜಿ ಕೊಡಿ ಎನ್ನುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ನೀರಿಗೆ ಹಣ ಕೊಡುವುದು ಸುಲಭವಲ್ಲ. ಮೀಟರ್ ಅಳವಡಿಸಿ ನೀರು ಕೊಡುವ ವ್ಯವಸ್ಥೆ ಹಳ್ಳಿ ಜನರಿಗೆ ಹೊರೆಯಾಗುತ್ತದೆ. ಮೀಟರ್ ಅಳವಡಿಸುವ ವ್ಯವಸ್ಥೆ ಕೈಬಿಟ್ಟು ಹಳ್ಳಿಗರ ಕೈ ಗೆಟುಕುವಂತೆ ವಾರ್ಷಿಕ ನಿರ್ವಹಣಾ ವೆಚ್ಚ ಮಾತ್ರ ಪಡೆದರೆ ಅನುಕೂಲಕರ.
- ಭೀಮಗಾನಹಳ್ಳಿ ನಾರಾಯಣಪ್ಪ, ಗ್ರಾಮಸ್ಥ
ಬೇಕಾಬಿಟ್ಟಿ ಕಾಮಗಾರಿ
ಬಂಡೆ ಸಿಕ್ಕ ಜಾಗದಲ್ಲಿ ಕೊರೆದು ಆಳದಲ್ಲಿ ಪೈಪ್‌ಲೈನ್ ಮಾಡಿಸಲು ಗುತ್ತಿಗೆದಾರರು ಕ್ರಮ ಕೈಗೊಂಡಿಲ್ಲ. ಬಂಡೆ ಮೇಲ್ಭಾಗದ ಸಿಮೆಂಟ್ ತೆಗೆದು ಪೈಪ್ ಜೋಡಿಸಲಾಗುತ್ತಿದೆ. ಮಣ್ಣು ಸಡಿಲವಾದ ಜಾಗದಲ್ಲೂ ಪೈಪ್‌ಲೈನ್ ಆಳಕ್ಕೆ ಇಳಿಯುತ್ತಿಲ್ಲ. ಕೆಲಸಗಾರರು ಗ್ರಾಮಸ್ಥರ ಮಾತಿಗೆ ಕಿವಿಗೊಡದೆ ಬೇಕಾಬಿಟ್ಟಿ ಕಾಮಗಾರಿ ಕೈಗೊಂಡಿದ್ದಾರೆ.
- ಮಂಜುಳಾ ಜಯಣ್ಣ, ದೋಣಿಮಡಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.