ADVERTISEMENT

ಬಂಗಾರಪೇಟೆ: ಮುಗಿಯದ ರೈಲ್ವೆ ಮೇಲ್ಸೇತುವೆ ಕಾಮಗಾರಿ

ಪ್ರತಿನಿತ್ಯ ಜನರಿಗೆ ತಪ್ಪದ ಕಿರಿಕಿರಿ l ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 8:13 IST
Last Updated 9 ಜೂನ್ 2025, 8:13 IST
ಬಂಗಾರಪೇಟೆ ಪಟ್ಟಣ ಬೂದಿಕೋಟೆ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ
ಬಂಗಾರಪೇಟೆ ಪಟ್ಟಣ ಬೂದಿಕೋಟೆ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ   

ಬಂಗಾರಪೇಟೆ: ಜನಸಾಮಾನ್ಯರಿಗೆ ಪ್ರತಿನಿತ್ಯ ಆಗುವ ಕಿರಿಕಿರಿ ತಪ್ಪಿಸಲು ಮತ್ತು ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೋಟ್ಯಂತರ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತವೆ. ಆದರೆ, ಇಂಥ ಕಾಮಗಾರಿಗಳು ಸರಿಯಾದ ಸಮಯಕ್ಕೆ ಮುಗಿಯದೆ ಆ ಮಾರ್ಗದಲ್ಲಿ ಸಂಚರಿಸುವ ಜನಸಾಮಾನ್ಯರಿಗೆ ಪ್ರತಿನಿತ್ಯವೂ ಗೋಳು ಎಂಬ ದುಃಸ್ಥಿತಿಯನ್ನು ತಂದೊಡ್ಡುತ್ತವೆ. 

ಇಲ್ಲಿನ ಬೂದಿಕೋಟೆ ವೃತ್ತದಿಂದ ಹುಣಸನಹಳ್ಳಿ ರೈಲ್ವೆ ಮೇಲ್ಸೇತುವೆವರೆಗೆ ಸಂಪರ್ಕ ಕಲ್ಪಿಸಲು ರೈಲ್ವೆ ಇಲಾಖೆಯು ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿದೆ. ಆದರೆ, ಈ ಕಾಮಗಾರಿ ಮೂರು ವರ್ಷಗಳಾದರೂ, ಪೂರ್ಣಗೊಂಡಿಲ್ಲ. ಜೊತೆಗೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಪೂರ್ಣಗೊಳ್ಳಲು ಜನಸಾಮಾನ್ಯರು ಮತ್ತಷ್ಟು ದಿನ ಕಾಯುವುದೇ ಗತಿಯಾಗಿದೆ.  

ಕಾಮಗಾರಿ ವಿಳಂಬದಿಂದ ಬಂಗಾರಪೇಟೆ–ಬೂದಿಕೋಟೆ, ಹೊಸಕೋಟೆ ಮತ್ತು ವಿ. ಕೋಟೆ ನಡುವೆ ಸಂಚರಿಸುವ ವಾಹನಗಳ ದಟ್ಟಣೆ ಅಧಿಕವಾಗಿದೆ. ಇದರಿಂದಾಗಿ ಬಂಗಾರಪೇಟೆ–ಬೂದಿಕೋಟೆ, ಹೊಸಕೋಟೆ ಮತ್ತು ವಿ. ಕೋಟೆ ಮಧ್ಯೆ ಬಸ್‌ನಲ್ಲಿ ಸಂಚರಿಸಬೇಕಾದ ಪ್ರಯಾಣಿಕರು ಪ್ರತಿನಿತ್ಯವೂ ಮುಖ್ಯರಸ್ತೆಯನ್ನು ಸುತ್ತಿಕೊಂಡು ಬಸ್ ನಿಲ್ದಾಣಕ್ಕೆ ಬರುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಜನಸಾಮಾನ್ಯರ ಸಮಯ ವ್ಯರ್ಥವಾಗುವ ಜೊತೆಗೆ ಕಿರಿಕಿರಿಯೂ ಆಗುತ್ತಿದೆ. 25 ಮೀಟರ್ ಅಂತರ ಇರುವ ರಸ್ತೆಗೆ ಒಂದು ಕಿಲೊ ಮೀಟರ್ ದೂರ ಸುತ್ತಿಕೊಂಡು ಬರುವಂತಾಗಿದೆ. 

ADVERTISEMENT

ಸೇತುವೆ ಕಾಮಗಾರಿ ಕೈಗೊಂಡ ಮೂರು ವರ್ಷಗಳಿಂದಲೂ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸ್ಥಳೀಯ ನಿವಾಸಿಗಳ ಸಮಸ್ಯೆ ಹೇಳತೀರದಾಗಿದೆ. ಈ ರಸ್ತೆಯಲ್ಲಿ ಅಂಗಡಿ– ಮುಂಗಟ್ಟು ಹೊಂದಿರುವ ವ್ಯಾಪಾರಸ್ಥರು, ವರ್ತಕರ ಸ್ಥಿತಿ ತೀರಾ ಶೋಚನೀಯವಾಗಿದೆ. ವ್ಯಾಪಾರ, ವಹಿವಾಟುಗಳು ನಡೆಯದೆ ಅವರೆಲ್ಲ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಆಂಧ್ರಪ್ರದೇಶ ಮೂಲದ ಖಾಸಗಿ ಸಂಸ್ಥೆಯೊಂದು ಈ ಕಾಮಗಾರಿ ನಿರ್ವಹಣೆ ಹೊಣೆ ಹೊತ್ತಿದೆ. ಆರಂಭದಲ್ಲಿ ಚುರುಕಾಗಿ ನಡೆಯುತ್ತಿದ್ದ ಕಾಮಗಾರಿಯು ಆ ಬಳಿಕ ಹಳ್ಳ ಹಿಡಿದಿದೆ. ಮಾಜಿ ಸಂಸದ ಎಸ್. ಮುನಿಸ್ವಾಮಿ ಮತ್ತು ಹಾಲಿ ಸಂಸದ ಮಲ್ಲೇಶಬಾಬು ಅವರು ಖುದ್ದಾಗಿ ಎರಡು–ಮೂರು ಬಾರಿ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಸೂಚಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಜನಸಾಮಾನ್ಯರ ಆಕ್ರೋಶ. 

ಸೇತುವೆ ಕಾಮಗಾರಿ ಆರಂಭಕ್ಕೂ ಮುನ್ನ ಈ ರಸ್ತೆಯಲ್ಲಿ ಜನರ ಓಡಾಟ ಅಧಿಕವಿತ್ತು. ಆದರೆ, ಕಾಮಗಾರಿ ಆರಂಭವಾದಾಗಿನಿಂದ ವಹಿವಾಟು ಸಂಪೂರ್ಣವಾಗಿ ಕುಸಿದಿದೆ. ಇದರಿಂದ ವರ್ತಕರು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಕಾಮಗಾರಿ ಶೀಘ್ರವೇ ಮುಗಿಯಲಿ ಎಂಬುದು ಜನರ ಬಯಕೆಯಾಗಿದೆ. ಇಲ್ಲಿ ವ್ಯಾಪಾರ ಆಗದ ಕಾರಣ ಬಾಡಿಗೆ ಕಟ್ಟಡದಲ್ಲಿ ಇದ್ದವರು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದಾರೆ. ಪಟ್ಟಣದ ತಲುಪಲು 1 ಕಿ.ಮೀ ಸುತ್ತಿಕೊಂಡು ಹೋಗಬೇಕಿದೆ. ಕಾಮಗಾರಿ ವಿಳಂಬದ ಬಗ್ಗೆ ಪ್ರಶ್ನಿಸುವವರು ಯಾರು ಇಲ್ಲದಂತಾಗಿದೆ.

ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ನಿಗದಿಪಡಿಸಿದ ಸಮಯದಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರು ಆಸಕ್ತಿ ವಹಿಸಿಲ್ಲ. ಇದರಿಂದ ನಿತ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ತುಮಟಗೆರೆ ನಿವಾಸಿ ನವೀನ್ ಗೌಡ ಅವರ ಆರೋಪ. 

ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರಾಸಕ್ತಿಯೇ ಕಾರಣ. ಇತ್ತೀಚೆಗೆ ಸಂಸದ ಮಲ್ಲೇಶಬಾಬು ಅವರು ಕಾಮಗಾರಿ ಪರಿಶೀಲಿಸಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗಳಿಸುವ ಭರವಸೆ ನೀಡಿದ್ದಾರೆ ಎಂದು ಆಟೊ ಚಾಲಕ ನಾಗರಾಜ್ ಮತ್ತು ಪುರಸಭೆ ಸದಸ್ಯ ಶಂಶುದ್ದೀನ್ ಬಾಬು ಹೇಳಿದರು.

ಎಸ್. ಮುನಿಸ್ವಾಮಿ ಕನಸಿನ ಯೋಜನೆ

ಆಗಿನ ಸಂಸದ ಎಸ್. ಮುನಿಸ್ವಾಮಿ ಅವರ ಕನಸಿನ ಯೋಜನೆಯಾದ ಬೂದಿಕೋಟೆ ರಸ್ತೆ ಅಭಿವೃದ್ಧಿ ಮತ್ತು ರೈಲ್ವೆ ಕ್ರಾಸಿಂಗ್‌ ತಪ್ಪಿಸಲು ಮೇಲ್ಸೇತುವೆ ನಿರ್ಮಾಣಕ್ಕಾಗಿ ಅವರು ಕೇಂದ್ರ ಮೇಲೆ ಒತ್ತಡ ಹಾಕುವ ಮೂಲಕ ಈ ಮಹತ್ವಾಕಾಂಕ್ಷಿಯಾದ ಯೋಜನೆಯನ್ನು ಜಿಲ್ಲೆಗೆ ತಂದಿದ್ದರು. ಅಲ್ಲದೆ ಈ ಯೋಜನೆ ಕಾಮಗಾರಿಗಾಗಿ ಅಮೃತ ಯೋಜನೆ ಅಡಿ ₹37 ಕೋಟಿ ಅನುದಾನ ಮಂಜೂರು ಮಾಡಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದರು. ಅವರು ಸಂಸದರಾಗಿದ್ದಾಗಲೇ ಕಾಮಗಾರಿ ಪ್ರಾರಂಭಿಸಲಾಗಿದ್ದು ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಸಾರ್ವಜನಿಕರ ಆರೋಪ. ರೈಲ್ವೆ ಪಿಡಬ್ಲ್ಯುಡಿ ಜತೆ ಸಮನ್ವಯ ತ್ವರಿತವಾಗಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಲೋಕೋಪಯೋಗಿ ಇಲಾಖೆ ಒಳಚರಂಡಿ ನಿರ್ಮಾಣ ಮಾಡಬೇಕಿದೆ. ಈ ಬಗ್ಗೆ ರೈಲ್ವೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಮಲ್ಲೇಶಬಾಬು ತಿಳಿಸಿದರು. 

ಒಂದು ವರ್ಷದಲ್ಲಿ ಪೂರ್ಣವಾಗಬೇಕಿದ್ದ ಕಾಮಗಾರಿ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾಮಗಾರಿ ವಿಳಂಬಕ್ಕೆ ಕಾರಣ
- ಕೆ.ವಿ. ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಮೇಲ್ಸೇತುವೆ ಕಾಮಗಾರಿ ವಿಳಂಬ ಕಾರಣ ಪರ್ಯಾಯ ರಸ್ತೆ ಕಲ್ಪಿಸಲಾಗಿದೆ. ಆದರೆ ತೀರಾ ಚಿಕ್ಕದಾಗಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ.
- ನಾಗೇಶ್, ಸ್ಥಳೀಯ ನಿವಾಸಿ
ಮೇಲ್ಸೇತುವೆ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ದೊಡ್ಡ ಮಟ್ಟದ ಕಾಮಗಾರಿ ಆಗಿರುವುದರಿಂದ ಹೆಚ್ಚು ಸಮಯ ಬೇಕಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ. 
ಎಸ್. ಮುನಿಸ್ವಾಮಿ, ಮಾಜಿ ಸಂಸದ 
ಬಂಗಾರಪೇಟೆ ಪಟ್ಟಣ ಬೂದಿಕೋಟೆ ರಸ್ತೆಯಲ್ಲಿ ನಿರ್ಮಾಣ ಮಾಡುತ್ತಿರುವ ರೈಲ್ವೇ ಮೇಲ್ಸೇತುವೆ ಕಾಮಗಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.