ADVERTISEMENT

ಪೋಲೇನಹಳ್ಳಿಯಲ್ಲಿ ಸ್ವಚ್ಛತೆ ಮರೀಚಿಕೆ

ಗಬ್ಬು ನಾರುತ್ತಿರುವ ಚರಂಡಿಗಳು l ಹೆಚ್ಚಿದ ಸೊಳ್ಳೆಗಳ ಹಾವಳಿ: ಗ್ರಾಮಸ್ಥರು ಕಂಗಾಲು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 5:17 IST
Last Updated 12 ಅಕ್ಟೋಬರ್ 2025, 5:17 IST
ಬಂಗಾರಪೇಟೆ ತಾಲ್ಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ ಸ್ವಚ್ಛ ಮಾಡದ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿರುವುದು
ಬಂಗಾರಪೇಟೆ ತಾಲ್ಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ ಸ್ವಚ್ಛ ಮಾಡದ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿರುವುದು   

ಬಂಗಾರಪೇಟೆ: ತಾಲ್ಲೂಕಿನ ಗಡಿ ಭಾಗದಲ್ಲಿರುವ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಲೇನಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಎಂಬುದೇ ಮರೀಚಿಕೆಯಾಗಿದೆ. ಎಲ್ಲಿ ನೋಡಿದರೂ ಕಸ, ಕಡ್ಡಿ ಕಂಡುಬರುತ್ತಿದೆ. ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಕೊಳಚೆ ನೀರು ಮೋರಿಯಲ್ಲಿ ಸರಾಗವಾಗಿ ಹರಿಯದೆ, ದುರ್ನಾತ ಬೀರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಇದರಿಂದಾಗಿ ಗ್ರಾಮದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ವ್ಯಾಪಿಸುವ ಅಪಾಯವಿದೆ. ಹೀಗಾಗಿ, ಚರಂಡಿ ಮತ್ತು ರಸ್ತೆಯನ್ನು ಸ್ವಚ್ಛಗೊಳಿಸಿ, ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಮಳೆ ಬಂದರೆ, ಚರಂಡಿಯಲ್ಲಿರುವ ದುರ್ನಾತದ ನೀರು ರಸ್ತೆಗಳ ಮೇಲೆ ಹರಿಯುತ್ತದೆ. ಇದರಿಂದಾಗಿ ಜನರು ಮೂಗು ಮುಚ್ಚಿಕೊಂಡೇ ನಡೆದಾಡುವ ಅನಿವಾರ್ಯತೆ ಇದೆ. ಕಿರಿದಾದ ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ. ಇಷ್ಟಾದರೂ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯಿತಿ ಸದಸ್ಯರು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ತಟಸ್ಥವಾಗಿ ಕುಳಿತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. 

ADVERTISEMENT

ಪ್ರತಿ ಮನೆಗೆ ಕಸ ಸಂಗ್ರಹಿಸಲು ಗ್ರಾಮ ಪಂಚಾಯಿತಿಯು ಕಸದ ಬುಟ್ಟಿಗಳನ್ನು ನೀಡಿದೆ. ಆದರೆ ಕಳೆದ ಐದು ವರ್ಷಗಳಿಂದ ಒಮ್ಮೆಯೂ ಕಸ ಸಂಗ್ರಹಿಸುವ ವಾಹನ ಮಾತ್ರ ಗ್ರಾಮಕ್ಕೆ ಬಂದಿಲ್ಲ. ಕಸ ಹಾಕಲು ಸ್ಥಳವಿಲ್ಲದ ಕಾರಣ ಚರಂಡಿ, ರಸ್ತೆಗಳ ಬದಿಗಳಲ್ಲಿ ಕಸವನ್ನು ಎಸೆಯಲಾಗುತ್ತಿದೆ. ಕಸದ ಬುಟ್ಟಿಗಳನ್ನು ಅನ್ಯ ಕಾರ್ಯಗಳಿಗೆ ಬಳಸಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಈ ಬಗ್ಗೆ ಪಿಡಿಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು. 

ಬಂಗಾರಪೇಟೆ ತಾಲ್ಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ ಸ್ವಚ್ಚತೆ ಮಾಡದ ಚರಂಡಿಗಳಲ್ಲಿ ನೀರು ತುಂಬಿ ಹೊರ ಬರುತ್ತಿರುವೂದು
ಬಂಗಾರಪೇಟೆ ತಾಲ್ಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ ಸ್ವಚ್ಚತೆ ಮಾಡದ ಚರಂಡಿಗಳಲ್ಲಿ ನೀರು ತುಂಬಿ ಹೊರ ಬರುತ್ತಿರುವೂದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.