ಪ್ರಜಾವಾಣಿ ವಾರ್ತೆ
ಬಂಗಾರಪೇಟೆ: ರಾಜ್ಯದಾದ್ಯಂತ ಐದು ಗ್ಯಾರಂಟಿಗಳನ್ನು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು, ಶೀಘ್ರವೇ 6ನೇ ಗ್ಯಾರಂಟಿಯಾಗಿ ’ಗೃಹ ಆರೋಗ್ಯ‘ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಈ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ‘ಗೃಹ ಆರೋಗ್ಯ ಸೇವೆ’ ಮನೆ ಬಾಗಿಲಿಗೆ ಯೋಜನೆ ಅನುಷ್ಠಾನದ ಪರಿಣಾಮಗಳ ಅಧ್ಯಯನದ ಉದ್ದೇಶಕ್ಕಾಗಿ ಫಲಾನುಭವಿಗಳ ಮನೆಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ‘ಗೃಹ ಆರೋಗ್ಯ ಯೋಜನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಭಾಗವಾಗಿ ಮೊದಲಿಗೆ ಕೋಲಾರ ಜಿಲ್ಲೆಯಲ್ಲಿ ಆರಂಭಿಸಲಾಯಿತು. ಇಲ್ಲಿ ಯೋಜನೆ ಯಶಸ್ವಿಯಾದರೆ, ಬೇರೆ ಜಿಲ್ಲೆಗಳಲ್ಲಿ ಲೋಪದೋಷಗಳು ಇಲ್ಲದಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆ ರಾಜ್ಯದಾದ್ಯಂತ ಜಾರಿಯಾಗಲಿದೆ ಎಂದರು.
‘ಇದೊಂದು ಉತ್ತಮ ಯೋಜನೆ. ಮನೆಗಳಿಗೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ 30 ವರ್ಷ ದಾಟಿದವರನ್ನು ತಪಾಸಣೆಗೆ ಒಳಪಡಿಸಿ ಏನಾದರೂ ಸಮಸ್ಯೆ ಇದ್ದರೆ ಉಚಿತವಾಗಿ ಚಿಕಿತ್ಸೆ, ಔಷಧ ನೀಡುತ್ತಾರೆ’ ಎಂದರು.
ಹಿಂದೆ ಗ್ರಾಮೀಣ ಜನರು ಆರೋಗ್ಯ ತಪಾಸಣೆಗಾಗಿ ತಾಲ್ಲೂಕು ಆಸ್ಪತ್ರೆಗೆ ಅಲೆಯಬೇಕಿತ್ತು. ಬಿಪಿ, ಶುಗರ್ ಕಾಯಿಲೆ ಇದ್ದರೂ, ತಪಾಸಣೆ ಮಾಡಿಸದೆ ನಿರ್ಲಕ್ಷ್ಯ ಮಾಡುತ್ತಿದ್ದರು. ಇದನ್ನು ಮನಗಂಡು, ಇಂಥ ಕಾಯಿಲೆಗಳನ್ನು ಆರಂಭದಲ್ಲೇ ತಡೆಯಲು ಗೃಹ ಆರೋಗ್ಯ ಯೋಜನೆ ಜಾರಿ ಮಾಡಲಾಗಿದೆ. ಗ್ರಾಮಗಳಲ್ಲಿ ಪ್ರತಿಯೊಂದು ಮನೆಗೂ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಅಧಿಕಾರಿಗಳು ತೆರಳಿ ಆರೋಗ್ಯ ತಪಾಸಣೆ ಮಾಡಿ ಔಷಧಿಗಳನ್ನು ನೀಡುವರು. ಇದರಿಂದ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸಹ ಸುಧಾರಿಸಲಿದೆ. ಈ ಯೋಜನೆ ಫಲ ಈಗಲೇ ನಿರೀಕ್ಷಿಸಲು ಆಗದು. ಮುಂದಿನ 15 ವರ್ಷಗಳ ಬಳಿಕ ಸಮಾಜಕ್ಕೆ ಸಿಗಲಿದೆ ಎಂದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಬೂದಿಕೋಟೆ ಗ್ರಾಮದಲ್ಲಿ ಮತ್ತೊಂದು ತಾಲ್ಲೂಕು ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಎಚ್ ರಘುನಾಥ್, ಗೋಪಾಲರೆಡ್ಡಿ, ಕೆ.ವಿ. ನಾಗರಾಜ್, ಪ್ರಮೀಳಮ್ಮ, ಡಿಎಚ್‌ಒ ಶ್ರೀನಿವಾಸ್, ಟಿಎಚ್‌ಒ ಸುನೀಲ್, ಮಹದೇವ್, ಕೃಷ್ಣ, ಎ.ಬಾಬು ಪಾರ್ಥಸಾರಥಿ, ಬಿ.ಎಂ. ಗೋವಿಂದ, ರವಿ, ದಯಾನಂದ ಆರ್, ಅ.ನಾ. ಹರೀಶ, ಚಂಗಾರೆಡ್ಡಿ, ಪಿಡಿಒ ಸರಸ್ವತಿ , ಕುಪೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.