ADVERTISEMENT

ಜಿಎಸ್‌ಟಿ ಹೆಚ್ಚಿಸಿದ್ದು ಅವರೇ, ಕಡಿಮೆ ಮಾಡಿದ್ದೂ ಅವರೇ: ನಾರಾಯಣಸ್ವಾಮಿ

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 7:07 IST
Last Updated 25 ಸೆಪ್ಟೆಂಬರ್ 2025, 7:07 IST
ಬಂಗಾರಪೇಟೆ ಪಟ್ಟಣದಲ್ಲಿ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರಿನ ಸರಬರಾಜು ಮಾಡುವ ₹14.5 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬುಧವಾರ ಭೂಮಿ ಪೂಜೆ ನೆರವೇರಿಸಿದರು
ಬಂಗಾರಪೇಟೆ ಪಟ್ಟಣದಲ್ಲಿ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರಿನ ಸರಬರಾಜು ಮಾಡುವ ₹14.5 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬುಧವಾರ ಭೂಮಿ ಪೂಜೆ ನೆರವೇರಿಸಿದರು   

ಬಂಗಾರಪೇಟೆ: ದೇಶದಾದ್ಯಂತ ಜಾರಿಗೊಂಡ ಜಿಎಸ್‌ಟಿಯನ್ನು ಈ ಹಿಂದೆ ಹೆಚ್ಚಳ ಮಾಡಿದ್ದು ಬಿಜೆಪಿಯವರೇ, ಇದೀಗ ಜಿಎಸ್‌ಟಿ ಇಳಿಕೆ ಮಾಡಿದ್ದೇವೆ ಎಂಬುದಾಗಿ ಅವರೇ ಸಂಭ್ರಮಾಚರಣೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. 

ಪಟ್ಟಣದಲ್ಲಿ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರಿನ ಸರಬರಾಜು ಮಾಡುವ ₹14.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿದ ಬಳಿಕ ಮಾತನಾಡಿದರು. 

ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿ ಇಳಿಕೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಮೋದಿ ಮತ್ತು ನಿರ್ಮಲಾ ಸೀತಾರಾಮನ್‌ ಅವರು ದಿನಬಳಕೆ ಅಗತ್ಯ ವಸ್ತುಗಳಿಗೆ ಜಿಎಸ್‌ಟಿಯನ್ನು ವಿಧಿಸಿ, ಜನಸಾಮಾನ್ಯರು ತೊಂದರೆ ಅನುಭವಿಸುವಂತೆ ಮಾಡಿದ್ದರು. ಮನಮೋಹನ್ ಸಿಂಗ್ ಸರ್ಕಾರ ಜಿಎಸ್‌ಟಿ ಹಾಕಿರಲಿಲ್ಲ. ಜಿಎಸ್‌ಟಿ ಹಾಕಿದ್ದು, ನೋಟ್ ಅಮಾನ್ಯೀಕರಣ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಮೋದಿ ಸರ್ಕಾರ. ಈಗ ಜಿಎಸ್‌ಟಿ ಕಡಿತ ಮಾಡಿರುವುದು ಸ್ವಾಗತ. ಆದರೆ, ಇದನ್ನು ಸಂಭ್ರಮಿಸುವ ಅಗತ್ಯವಿಲ್ಲ. ಇದು ಅಂಥ ಸಾಧನೆಯೇನಲ್ಲ ಎಂದರು. 

ADVERTISEMENT

ಕೈಗಾರಿಕೆಗಳನ್ನು ಆರಂಭಿಸಿ ಯುವಕರಿಗೆ ಉದ್ಯೋಗ ಕಲ್ಪಿಸಲಿಲ್ಲ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಿಲ್ಲ. ಇದ್ಯಾವುದನ್ನೂ ಮಾಡದೆ ಸಂಭ್ರಮಾಚರಣೆ ಮಾಡಿ ಜನರ ದಿಕ್ಕು ತಪ್ಪಿಸಬಾರದು. ಜಿಎಸ್‌ಟಿಯಿಂದ ಈವರೆಗೆ ಎಷ್ಟು ಕೋಟಿ ಹಣವನ್ನು ಜನರಿಂದ ಪಡೆದಿದ್ದಾರೆ ಎಂಬುದಕ್ಕೆ ಲೆಕ್ಕ ನೀಡಬೇಕು. ಇಡೀ ದೇಶದಲ್ಲಿ ಮಹಾರಾಷ್ಟ್ರ ನಂತರ ಹೆಚ್ಚು ಜಿಎಸ್‌ಟಿ ಕಟ್ಟುತ್ತಿರುವುದು ಕರ್ನಾಟಕ. ಇದುವರೆಗೆ ವಸೂಲಿ ಮಾಡಿರುವ ಲಕ್ಷಾಂತರ ಕೋಟಿ ಹಣದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ಸಂಸದ ಮಲ್ಲೇಶ ಬಾಬು ಸೇರಿದಂತೆ ಎಲ್ಲ ಸಂಸದರು ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.

75 ಲಕ್ಷ ಜನಸಂಖ್ಯೆಗೆ ತಕ್ಕಂತೆ ಪೈಪ್‌ಲೇನ್ ವಿನ್ಯಾಸ ಮಾಡಲಾಗಿದೆ. ಹಳೆಯ ಪೈಪ್‌ಲೇನ್ ಅನ್ನು ಬದಲಾಯಿಸಲಾಗುವುದು. ಕಾಮಗಾರಿ ನಡೆಯುವ ಸಮಯದಲ್ಲಿ ಎಲ್ಲಿಯಾದರೂ ಸಮಸ್ಯೆಯಾದರೆ ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ, ಸದಸ್ಯ ಅರಣಾಚಲಂ ಮಣಿ, ಶಫಿ, ರಾಜನ್, ಬಾಬುಲಾಲ್, ನಯಾಜ್, ಪೊಣ್ಣಿ, ರತ್ನಮ್ಮ, ರಂಗರಾಮಯ್ಯ, ಶಾಧಿಕ್, ಅರುಣ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಹದೇವ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.