
ಬೇತಮಂಗಲ: ಸಮೀಪದ ಬಂಗಾರು ತಿರುಪತಿ (ಗುಟ್ಟಹಳ್ಳಿ) ಅಲುಮೇಲು ಮಂಗಮ್ಮ ಸಮೇತ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಭರತ ಹುಣ್ಣಿಮೆ ಜಾತ್ರಾ ಮಹೋತ್ಸವ ಫೆ.1 ರಂದು ನಡೆಯಲಿದೆ.
ಜಾತ್ರಾ ಅಂಗವಾಗಿ ದೇವಾಲಯದಲ್ಲಿ ಜ.26 ರಿಂದ ಪ್ರತಿನಿತ್ಯವೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಜೊತೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಜ.31 ರಂದು ಹಗಲು ಗಜ ವಾಹನೋತ್ಸವ ಮತ್ತು ಗರುಡೋತ್ಸವ ನೆರವೇರಲಿವೆ. ಜೊತೆಗೆ ರಾತ್ರಿ 8ಕ್ಕೆ ‘ತ್ರಿಜನ್ಮ ಮೋಕ್ಷ’ ಪೌರಾಣಿಕ ನಾಟಕ ಪ್ರದರ್ಶನ ಹಾಗೂ ರಾತ್ರಿ 9ಕ್ಕೆ ವೆಂಕಟರಮಣ ಸ್ವಾಮಿ ಕಲ್ಯಾಣೋತ್ಸವ ನಡೆಯಲಿದೆ.
ಫೆ.1 ರಂದು ಬೆಳಗ್ಗೆ 8ಕ್ಕೆ ಕೃಷ್ಣ ಗಂಧೋತ್ಸವ ನಡೆಯಲಿದೆ. ಮಧ್ಯಾಹ್ನ 11 ರಿಂದ 12 ಗಂಟೆಯೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ಸಿಗಲಿದೆ. ಭಕ್ತರಿಗೆ ಅನ್ನದಾಸೋಹ ನಡೆಯಲಿದೆ ಎಂದರು.
ಫೆ.15ರಂದು ಮಹಾಶಿವರಾತ್ರಿ ಪ್ರಯುಕ್ತ ತೆಪ್ಪೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.16ರಂದು ಪಾರಣೆ ಜಾತ್ರೆಯೊಂದಿಗೆ ಈ ಬಾರಿಯ ಉತ್ಸವಗಳು ಮುಕ್ತಾಯಗೊಳ್ಳಲಿವೆ. ಭಕ್ತರ ಸುಲಭ ದರ್ಶನಕ್ಕೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ಮಂಜುನಾಥ್ ಮತ್ತು ಪೇಸ್ಕಾರ್ ಆರ್. ಸುರೇಶ್‌ಬಾಬು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.