ADVERTISEMENT

ಬ್ಯಾಂಕ್‌ ಅಧಿಕಾರಿಗಳಿಗೆ ಇಚ್ಚಾಶಕ್ತಿ ಇಲ್ಲ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 11:10 IST
Last Updated 1 ಸೆಪ್ಟೆಂಬರ್ 2019, 11:10 IST
ಕೋಲಾರದ ಡಿಸಿಸಿ ಬ್ಯಾಂಕ್ ಸಭಾಗಂಣದಲ್ಲಿ ನಡೆದ ಭಾನುವಾರ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿದರು.
ಕೋಲಾರದ ಡಿಸಿಸಿ ಬ್ಯಾಂಕ್ ಸಭಾಗಂಣದಲ್ಲಿ ನಡೆದ ಭಾನುವಾರ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿದರು.   

ಕೋಲಾರ: ‘ಅಧಿಕಾರಿಗಳು ತಮ್ಮ ಪ್ರವೃತ್ತಿಯನ್ನು ಬದಲಾಯಿಸಿಕೊಂಡು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಾಕೀತು ಮಾಡಿದರು.

ನಗರದ ಡಿಸಿಸಿ ಸಭಾಗಂಣದಲ್ಲಿ ಭಾನುವಾರ ನಡೆದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಹಿಂದೆ ಬ್ಯಾಂಕ್ ಯಾವ ಪರಿಸ್ಥಿತಿಯಲ್ಲಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಬ್ಯಾಂಕ್ ಋಣದಲ್ಲಿ ಬದುಕುತ್ತಿದ್ದೀರ, ಮೋಸ ಮಾಡಕ್ಕೆ ಹೋಗಬಡಿ’ ಎಂದು ಸಲಹೆ ನೀಡಿದರು.

‘ಬ್ಯಾಂಕ್‌ ಎಂದರೆ ರೈತರು, ಮಹಿಳೆಯರು ಡಿಸಿಸಿ ಬ್ಯಾಂಕ್‌ ಕಡೆ ಮುಖ ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಸಾಲ ವಿತರಿಸಲಾಗಿದ್ದು, ಅಷ್ಟೇ ಪ್ರಮಾಣಿಕವಾಗಿ ಮರುಪಾವತಿಯಾಗುತ್ತಿದೆ. ಕೆಲ ಮುಖಂಡರು ಮಹಿಳಾ ಸ್ವಸಹಾಯ ಸಂಘಗಳಿಂದ ಹಣ ಪಡೆದು ಬ್ಯಾಂಕಿಗೆ ಕಟ್ಟಿಲ್ಲ, ಅಂತಹವರ ವಿರುದ್ಧ ದೂರು ದಾಖಲು ಮಾಡಿ’ ಎಂದು ವ್ಯವಸ್ಥಾಪಕರಿಗೆ ಸೂಚಿಸಿದರು.

ADVERTISEMENT

‘ಜಿಲ್ಲೆಯಲ್ಲಿ ₹ 108 ಕೋಟಿ ಬೆಳೆ ಸಾಲ ಹಾಗೂ ₹ 170 ಕೋಟಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದೆ, ಫಲಾನುಭವಿಗಳಿಗೆ ಸಾಲ ನೀಡಲು ಶಿಫಾರಸ್ಸು ಮಾಡಿರುವುದು ನೀವೆ, ವಸೂಲಿ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಬದ್ಧತೆಯಿಂದ ಕೆಲಸ ಮಾಡಿದರೆ ಗುರಿ ಸಾಧನೆ ಮಾಡುವುದು ಸುಲಭ’ ಎಂದು ಹೇಳಿದರು.

‘ರೈತರಿಗೆ, ಮಹಿಳೆಯರಿಗೆ ಮಾಡಿರುವ ಸಾಲ, ಮರುಪಾವತಿ ಬಗ್ಗೆ ಶಾಖವಾರು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದಾಗ, ಸಮಗ್ರವಾಗಿ ಮಾಹಿತಿ ನೀಡಲು ವಿವಿಧ ಶಾಖೆಯ ವ್ಯವಸ್ಥಾಪಕರು ತಡಬಡಿಸಿದರು.

ಇದಕ್ಕೆ ಗರಂ ಅದ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ, ‘ನಿಮಗೆಲ್ಲಾ ಇಚ್ಛಾಶಕ್ತಿ ಕೊರತೆ ಇದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ, ಒಬ್ಬರ ಒತ್ತಾಯದ ಮೇರೆ ಕೆಲಸ ಮಾಡುವುದನ್ನು ಬಿಡಿ, ಇಲ್ಲಿ ನಾವೇನು ಸ್ವಾರ್ಥಕ್ಕೆ ಕೆಲಸ ಮಾಡುತ್ತಿಲ್ಲ. ನನ್ನಿಂದ ಹಿಂಸೆ ಆದರೆ ಹೇಳಿ ಈಗಲೇ ಬ್ಯಾಂಕ್‌ ಬಿಟ್ಟು ಹೋಗುತ್ತೇನೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಗಮನಿಸುತ್ತಿದ್ದರೆ ಇಲ್ಲಿ ಯಾರು ಬದಲಾಗಿರುವ ಲಕ್ಷಣಗಳು ಕಾಣುತ್ತಿಲ್ಲ, ಶೇ.3ರಲ್ಲಿ ಇದ್ದ ಎನ್‌ಪಿಎ ಪ್ರಮಾಣ ಈಗ ಶೇ.8ಕ್ಕೆ ಏರಿಕೆಯಾಗಿದ್ದು, ಇವರು ಎಷ್ಟು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿದೆ’ ಎಂದು ಅಸಮಾಧಾನವ್ಯಕ್ತಪಡಿಸಿದರು.

‘ರೈತರು, ಮಹಿಳೆರು ಠೇವಣಿ ಇಟ್ಟಿರುವ ಹಣದಲ್ಲಿ ನಿವೆಲ್ಲಾ ಸಂಬಂಳ ತೆಗೆದುಕೊಳ್ಳುತ್ತಿದ್ದೀರ, ಬದ್ಧತೆಯಿಂದ ಕೆಲಸ ಮಾಡಿದ್ದರೆ ಈಗ ಸಮಸ್ಯೆ ಎದುರಾಗುತ್ತಿರಲಿಲ್ಲ. ರಜೆ ಯಾವಾಗ ಬರುತ್ತದೆ ಎಂದು ಕಾದು ನೋಡುವ ನಿಮಗೆ ಬಡವರಪರ ಕೆಲಸ ಮಾಡಲು ಮನಸ್ಸಿಲ್ಲವೆ’ ಎಂದು ಪ್ರಶ್ನಿಸಿದರು.

‘ಸೋಸೈಟಿವಾರು ಬಾಕಿ ಇರುವ ಮಹಿಳಾ ಸಂಘಗಳ ಮತ್ತು ರೈತರ ಸಾಲ ವಸೂಲಿ ಮಾಡಲು ಅಯಾ ತಾಲ್ಲೂಕಿನ ವ್ಯವಸ್ಥಾಪಕರು ಜವಬ್ದಾರಿವಹಿಸಿಕೊಳ್ಳಬೇಕು, ಸೆ.14ರೊಳಗೆ ಸಂಪೂರ್ಣ ಸಾಲ ವಸೂಲಿ ಅಗಬೆಕು’ ಎಂದು ತಾಕೀತು ಮಾಡಿದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಮಾತನಾಡಿ, ‘ಸಹಕಾರಿ ಬ್ಯಾಂಕ್ ಅಧಿಕಾರಿಗಳು ಸರ್ಕಾರಿ ನೌಕರರಲ್ಲ, ಬ್ಯಾಂಕ್ ಅಭಿವೃದ್ಧಿಯಾದಾಗ ಮಾತ್ರ ವೇತನ ಬರುತ್ತದೆ, ಸಾಲ ನೀಡುವ ಮತ್ತು ವಸೂಲಿ ಮಾಡುವವಲ್ಲಿ ಸಿಬ್ಬಂದಿ ಪಾತ್ರ ಬಹಳ ಮುಖ್ಯವಾಗಿದ್ದು, ಜವಾಬ್ದಾರಿಯಿಂದ ಕೆಲಸ ಮಾಡಿ’ ಎಂದು ಸೂಚಿಸಿರು.

ಸಹಾಯಕ ಮಹಾ ಪ್ರಬಂಧಕರಾದ ಬೈರೇಗೌಡ, ಶಿವಕುಮಾರ್, ಕಲ್ಲೀಂವುಲ್ಲಾ, ಚೌಡಪ್ಪ, ದೊಡ್ಡಮುನಿ, ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.