ADVERTISEMENT

ಕೆಜಿಎಫ್: ಎಂ.ಜಿ.ಮಾರುಕಟ್ಟೆಯಲ್ಲಿ ಹಸು ಮಾಂಸ ಮಾರಾಟ ಪುನಃ ಆರಂಭ

ಬಗೆಹರಿದ ವಿವಾದ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 6:05 IST
Last Updated 24 ಅಕ್ಟೋಬರ್ 2025, 6:05 IST
ಕೆಜಿಎಫ್ ಎಂ.ಜಿ.ಮಾರುಕಟ್ಟೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಸೇವ್ ಕೆಜಿಎಫ್ ಸಮಿತಿ ಮತ್ತು ಮಾಂಸದ ವರ್ತಕರು ಭಾಗವಹಿಸಿದ್ದರು
ಕೆಜಿಎಫ್ ಎಂ.ಜಿ.ಮಾರುಕಟ್ಟೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಸೇವ್ ಕೆಜಿಎಫ್ ಸಮಿತಿ ಮತ್ತು ಮಾಂಸದ ವರ್ತಕರು ಭಾಗವಹಿಸಿದ್ದರು   

ಕೆಜಿಎಫ್: ರಾಬರ್ಟ್‌ಸನ್ ಪೇಟೆ ಎಂ.ಜಿ.ಮಾರುಕಟ್ಟೆಯಲ್ಲಿ ಹಸು ಮಾಂಸ ವಿಲೇವಾರಿ ಕುರಿತು ನಡೆದಿದ್ದ ವಿವಾದ ಗುರುವಾರ ಬಗೆಹರಿದಿದ್ದು, ಮಾಂಸ ಮಾರಾಟವನ್ನು ವರ್ತಕರು ಪುನಃ ಆರಂಭಿಸಿದ್ದಾರೆ.

ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ದಯಾನಂದ್, 15 ದಿನಗಳಿಂದ ಹಸು ಕಡಿತ ಮತ್ತು ಅದರ ಮಾಂಸ ಮಾರಾಟ ಪ್ರಕ್ರಿಯೆಗೆ ನಗರಸಭೆ ಮತ್ತು ಪೊಲೀಸರು ಅಡ್ಡಿ ಉಂಟುಮಾಡಿದ್ದರು. ಸೇವ್ ಕೆಜಿಎಫ್ ಸಮಿತಿ ಈ ಸಂಬಂಧ ಶಾಸಕಿ, ನಗರಸಭೆ ಮತ್ತು ಪೊಲೀಸ್ ಇಲಾಖೆ ಜೊತೆ ಚರ್ಚೆ ನಡೆಸಿತ್ತು. ಈಗ ಶಾಸಕಿ ಇಲ್ಲಿಯೇ ಹಸು ಕಡಿತ ಮಾಡಲು ಸಮ್ಮತಿ ನೀಡಿರುವುದರಿಂದ ಪ್ರಕ್ರಿಯೆ ಶುರುವಾಗಿದೆ. ವರ್ತಕರು ಅಂಡರ್‌ಸನ್‌ಪೇಟೆಯಲ್ಲಿರುವ ಸ್ಲಾಟರ್ ಹೌಸ್‌ನಲ್ಲಿ ಮಾತ್ರ ಹಸು ಕಟಾವು ಮಾಡಬೇಕು. ಎಲ್ಲರೂ ಅಲ್ಲಿಗೆ ಹೋಗಿ ಹಸು ಕಡಿದರೆ ಅಭ್ಯಂತರ ಇರುವುದಿಲ್ಲ ಎಂದು ಹೇಳಿದರು.

ಸೇವ್ ಕೆಜಿಎಫ್‌ ಸಮಿತಿ ಅಧ್ಯಕ್ಷ ಜ್ಯೋತಿ ಬಸು ಮಾತನಾಡಿ, ಸಮಿತಿ ಜನಪರ ಹೋರಾಟವನ್ನು ನಡೆಸುತ್ತಿದೆ. ಕಸಾಯಿ ಖಾನೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದೆ. ನೂರು ವರ್ಷದ ಇತಿಹಾಸ ಇದೆ. ಬೆಂಗಳೂರು ಮತ್ತು ಕೆಜಿಎಫ್‌ನಲ್ಲಿ ಮಾತ್ರ ಹಸುಗಳ ಕಸಾಯಿ ಖಾನೆ ಇದೆ. ನಗರದಲ್ಲಿ ಬಹುತೇಕ ಮಂದಿ ಹಸು ಮಾಂಸ ಸೇವನೆ ಮಾಡುತ್ತಾರೆ. ಅದು ಬಡವರಿಗೆ ಸಿಗುವ ಕಡಿಮೆ ಬೆಲೆಯ ಮಾಂಸ. ಕಸಾಯಿ ಖಾನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಗರಸಭೆ ಜವಾಬ್ದಾರಿ ಎಂದರು.

ADVERTISEMENT

ಹಸು ಕಡಿಯಬೇಕಾದರೆ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಗ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳ ಕಿರುಕುಳ ಇರುವುದಿಲ್ಲ. ಮಾಂಸದ ಮಾರುಕಟ್ಟೆಯಲ್ಲಿ ಎಲ್ಲಾ ವರ್ತಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಎಂ.ಜಿ.ಮಾರುಕಟ್ಟೆಯಲ್ಲಿರುವ ಮೀನು ಮಾರುಕಟ್ಟೆ, ಕುರಿ ಮತ್ತು ಮೇಕೆ ಮಾಂಸದ ಮಾರುಕಟ್ಟೆ ಮತ್ತು ಬೀಫ್ ಮಾರುಕಟ್ಟೆಯಲ್ಲಿ ಎಲ್ಲಾ ವರ್ತಕರು ಆಧುನಿಕ ಶೈಲಿಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಸೆಂಗು ಟೋವನ್, ಕರುಣ, ಜಯಶೀಲನ್, ದಕ್ಷಿಣ ಮೂರ್ತಿ, ಚಂದ್ರಶೇಖರ್, ಶ್ರೀಕುಮಾರ್, ತಾಜ್, ನೌಷದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.